ದಾವಣಗೆರೆ: ಪಂಚಗ್ಯಾರಂಟಿ ಯೋಜನೆ ಜನರ ಬದುಕಿನಲ್ಲಿ ಬೆಳಕು ಮೂಡಿಸಿವೆ. ಅಭಿವೃದ್ಧಿ, ತಲಾದಾಯ ಹೆಚ್ಚಳದೊಂದಿಗೆ ಖರೀದಿ ಶಕ್ತಿ ಹೆಚ್ಚಿಸಿವೆ. ಪಂಚಗ್ಯಾರಂಟಿ ಯೋಜನೆಗೆ ಜಿಲ್ಲೆಯಲ್ಲಿ ₹ 2,256 ಕೋಟಿ ವೆಚ್ಚವಾಗಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆ ಮನೆ ಮಾತಾಗಿದೆ. ಈ ಯೋಜನೆ ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕರ್ನಾಟಕದ ಈ ಮಾದರಿಯನ್ನು ಹಲವು ರಾಜ್ಯಗಳು ಅನುಕರಣೆ ಮಾಡುತ್ತಿವೆ. ಅಧಿಕಾರಿಗಳು ಉದಾಸೀನ ತೋರದೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಸೂಚನೆ ನೀಡಿದರು.
‘ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕೆಲಸ ಆಗಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಲೋಪದೋಷಗಳು ಕಂಡುಬಂದಲ್ಲಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಈ ಯೋಜನೆ ಹಾಗೂ ಸರ್ಕಾರದ ಸೌಲಭ್ಯಗಳಿಂದ ಯಾರೊಬ್ಬರೂ ಹೊರಗುಳಿಯಬಾರದು. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದರು.
‘ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ವಿವಿಧ ರೀತಿಯ ಲೋಪದೋಷ ಉಂಟಾಗಿವೆ. ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆ ಸಮಯ, ತೂಕದಲ್ಲಿ ವ್ಯತ್ಯಾಸ ಆಗಿವೆ ಎಂಬ ಆರೋಪಗಳಿವೆ. ಅಧಿಕಾರಿಗಳು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಗ್ರವಾಗಿ ಪರಿಶೀಲಿಸಬೇಕು. ಈ ವೇಳೆ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್, ಉಪಾಧ್ಯಕ್ಷರಾದ ರಾಜೇಶ್ವರಿ, ಕೆ.ಎನ್. ಮಂಜುನಾಥ್, ನಂಜಾನಾಯ್ಕ, ಅನೀಶ್ ಪಾಷಾ ಹಾಜರಿದ್ದರು.
ಪ್ರತಿ ಫಲಾನುಭವಿಗೂ ಗ್ಯಾರಂಟಿ ತಲುಪಿಸಲು ಸೂಚನೆ ಪಡಿತರ ತೂಕದಲ್ಲಿ ವ್ಯತ್ಯಾಸದ ಆರೋಪ ಹಲವು ರಾಜ್ಯಗಳಿಗೆ ಮಾದರಿಯಾದ ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.