ADVERTISEMENT

ಸಮೀಕ್ಷೆ: ಅಭಿಯಾನಕ್ಕೆ ವಚನಾನಂದಶ್ರೀ ಚಾಲನೆ

ಸಮೀಕ್ಷೆ: ಪಂಚಮಸಾಲಿ ಸಮುದಾಯದ ಜಾಗೃತಿ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:45 IST
Last Updated 23 ಸೆಪ್ಟೆಂಬರ್ 2025, 5:45 IST
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಪಂಚಮಸಾಲಿ ಸಮುದಾಯ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ದಾವಣಗೆರೆಯ ಸರಸ್ವತಿ ಬಡಾವಣೆಯಲ್ಲಿ ಸೋಮವಾರ ಚಾಲನೆ ನೀಡಿದರು
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಪಂಚಮಸಾಲಿ ಸಮುದಾಯ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ದಾವಣಗೆರೆಯ ಸರಸ್ವತಿ ಬಡಾವಣೆಯಲ್ಲಿ ಸೋಮವಾರ ಚಾಲನೆ ನೀಡಿದರು   

ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಮತ್ತು ಧರ್ಮದ ಕಾಲಂಗಳಲ್ಲಿ ನಮೂದಿಸಬೇಕಾಗಿರುವ ಮಾಹಿತಿಯ ಬಗ್ಗೆ ಪಂಚಮಸಾಲಿ ಸಮುದಾಯ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಚಾಲನೆ ನೀಡಿದರು.

ನಗರದ ಸರಸ್ವತಿ ಬಡಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಮನೆಯೊಂದಕ್ಕೆ ಸೋಮವಾರ ಭೇಟಿ ನೀಡಿದ ಸ್ವಾಮೀಜಿ, ಧರ್ಮ ಹಿಂದೂ ಹಾಗೂ ಜಾತಿ ಪಂಚಮಸಾಲಿ ಲಿಂಗಾಯತ ಎಂದು ಬರೆಸುವಂತೆ ಸೂಚಿಸಿದರು.

‘ಸಮೀಕ್ಷೆ ಸೋಮವಾರದಿಂದ ಆರಂಭಗೊಂಡಿದೆ. ಜಾತಿ–ಧರ್ಮದ ಕಾಲಂನಲ್ಲಿ ಉಲ್ಲೇಖಿಸಬೇಕಾಗಿರುವ ಮಾಹಿತಿಯ ಬಗ್ಗೆ ಜನರಲ್ಲಿ ಗೊಂದಲ ಇದೆ. ಹೀಗಾಗಿ, ಪ್ರತಿ ಜಿಲ್ಲೆಯಲ್ಲಿ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯ ಶುರುವಾಗಿದೆ’ ಎಂದು ವಚನಾನಂದ ಸ್ವಾಮೀಜಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

‘ಸಮೀಕ್ಷೆಯನ್ನು ಸರ್ಕಾರ ತರಾತುರಿಯಲ್ಲಿ ಮಾಡುತ್ತಿರುವಂತೆ ಕಾಣುತ್ತಿದೆ. ಇದರಿಂದ ಜಾತಿ, ಧರ್ಮದ ಹೆಸರಿನಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಸರಿಯಾದ ಸಿದ್ಧತೆ, ಅರಿವು ಮೂಡಿಸಿ ಸಮೀಕ್ಷೆ ಆರಂಭಿಸಿದ್ದರೆ ಅನುಕೂಲ ಆಗುತ್ತಿತ್ತು. ಜನರ ತೆರಿಗೆ ಹಣ ಪೋಲಾಗುವುದು ತಪ್ಪುತ್ತಿತ್ತು’ ಎಂದರು.

‘ಅನೇಕ ಸಚಿವರಿಗೆ ಸರ್ಕಾರದ ನಡೆಯ ಬಗ್ಗೆ ಆಕ್ಷೇಪವಿದೆ. ಪಕ್ಷದ ನಿರ್ಧಾರ ವಿರೋಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ಮಠಾಧೀಶರನ್ನು ಕೋರಿಕೊಂಡಿದ್ದಾರೆ’ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಬಾದಾಮಿ ಚಂದ್ರಶೇಖರ್, ಕಾಶಿನಾಥ್ ಹಾಜರಿದ್ದರು.

ಹಿಂದೂ ಧರ್ಮ ಒಂದು ಆಲದ ಮರ. ವೈದಿಕ ಹಾಗೂ ಅವೈದಿಕ ಪರಂಪರೆಗಳೆರಡನ್ನೂ ಇದು ಒಳಗೊಂಡಿದೆ. ಲಿಂಗಾಯತ ಈ ಮರದ ಟೊಂಗೆ
ವಚನಾನಂದ ಸ್ವಾಮೀಜಿ ಪಂಚಮಸಾಲಿ ಗುರುಪೀಠ

ಸಮುದಾಯ ಛಿದ್ರ: ಕಳವಳ

‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಒಳಪಂಗಡಗಳನ್ನು ವಿಭಜಿಸಿ ಲಿಂಗಾಯತ ಸಮುದಾಯ ಛಿದ್ರಗೊಳಿಸುವ ಹುನ್ನಾರವೂ ಅಡಗಿದೆ’ ಎಂದು ಹರಿಹರ ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ. ಉಮಾಪತಿ ಕಳವಳ ವ್ಯಕ್ತಪಡಿಸಿದರು. ‘ಲಿಂಗಾಯತ ಸಮುದಾಯ ಜಾಗೃತಗೊಳ್ಳುವ ಅಗತ್ಯವಿದೆ. ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಲಿಂಗಾಯತ ಉಪಜಾತಿ ನಮೂದಿಸಬೇಕಿದೆ. ಪಂಚಮಸಾಲಿ ಸಮುದಾಯದ ಶಕ್ತಿ ತೋರಿಸಲು ಇದೊಂದು ಅವಕಾಶ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.