ADVERTISEMENT

ನೋಟಾಗಿಂತ ಕಡಿಮೆ ಮತ ಪಡೆದು ದಾಖಲೆ ಬರೆದ ವೀರರು

ಠೇವಣಿ ಕಳೆದುಕೊಂಡವರ ಪರೇಡ್

ಚಂದ್ರಶೇಖರ ಆರ್‌.
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST
   

ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಎಲ್ಲಾ ವಾರ್ಡ್‌ಗಳಲ್ಲೂ ಮೇಲಿನ ಯಾವುದೂ ಅಲ್ಲ ಎಂಬ ನೋಟಾಗೆ ಮತ ಚಲಾಯಿಸಿದ ಮತದಾರ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದು ಪ್ರಮುಖ ಅಂಶ.

ಕೆಲವು ವಾರ್ಡ್‌ಗಳಲ್ಲಿ ನೋಟಾಕ್ಕಿಂತ ಕಡಿಮೆ ಮತ ಪಡೆಯುವ ಮೂಲಕ ಅಭ್ಯರ್ಥಿ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದರೆ, ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಠೇವಣಿ ಕಳೆದುಕೊಂಡವರ ಪಟ್ಟಿಯೇ ಇದೆ. ವಾರ್ಡ್‌ 45ರಲ್ಲಿ ಪಕ್ಷೇತರ ಅಭ್ಯರ್ಥಿ ಕೇವಲ 4 ಮತಗಳ ಅಂತರದಿಂದ ಗೆಲುವು ಕಂಡಿದ್ದರೆ, ವಾರ್ಡ್‌ 4ರಲ್ಲಿ ಕಾಂಗ್ರೆಸ್‌ನ ಅಹ್ಮದ್‌ ಕಬೀರ್‌ ಖಾನ್‌ ಅತಿ ಹೆಚ್ಚು 2863 ಮತಗಳ ಅಂತರದಿಂದ ಜಯ ತಮ್ಮದಾಗಿಸಿಕೊಂಡಿದ್ದಾರೆ.

ಠೇವಣಿ ಕಳೆದುಕೊಂಡವರ ಪರೇಡ್:ಎಲ್ಲಾ ವಾರ್ಡ್‌ಗಳಲ್ಲೂ ಅಭ‌್ಯರ್ಥಿಗಳು ಠೇವಣಿ ಕಳೆದುಕೊಂಡು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 83 ಜನ ಸ್ಪರ್ಧಿಗಳ ಠೇವಣಿ ಜಪ್ತಿಯಾಗಿದೆ. ಕೆಲ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಮೂವರಲ್ಲಿ ಗೆದ್ದವರು, ಸಮೀಪದ ಪ್ರತಿಸ್ಪರ್ಧಿಯನ್ನು ಹೊರತುಪಡಿಸಿದರೆ ಉಳಿದ ಒಬ್ಬ ಸ್ಪರ್ಧಿಯೂ ಠೇವಣಿ ಕಳೆದುಕೊಂಡಿದ್ದಾರೆ. ಬಹುತೇಕ ವಾರ್ಡ್‌ಗಳಲ್ಲಿ 4ರಿಂದ 7 ಜನ ಸ್ಪರ್ಧಿಗಳ ಠೇವಣಿ ಜಪ್ತಿಯಾಗಿದೆ.

ADVERTISEMENT

ನೋಟಾ ಹೆಚ್ಚು:ಚುನಾವಣೆಯಲ್ಲಿ ನೋಟಾವೇ ಹೆಚ್ಚು ಚಲಾವಣೆಯಾಗಿದೆ. 1670 ನೋಟಾ ಮತ ಚಲಾವಣೆಗೊಂಡಿದ್ದು,9 ಅಭ್ಯರ್ಥಿಗಳು ನೋಟಾಗಿಂತ ಕಡಿಮೆ ಮತ ಪಡೆದಿದ್ದಾರೆ.

ವಾರ್ಡ್‌ 6ರಲ್ಲಿ ಪಕ್ಷೇತರ ಅಭ್ಯರ್ಥಿ ಶಿವಳ್ಳಿ ರಂಗಪ್ಪ 8 ಮತ ಪಡೆಯುವ ಮೂಲಕ ನೋಟಾ (36)ಗಿಂತ ಕಡಿಮೆ ಮತ ಪಡೆದಿದ್ದಾರೆ. ವಾರ್ಡ್ 13ರ ಪಕ್ಷೇತರ ಅಭ್ಯರ್ಥಿ ಬೀಬಿ ಹಜ್ರಾಬಾನು ನೋಟಾ (39) ಗಿಂತ ಕಡಿಮೆ 37 ಮತ ಪಡೆದರೆ, ವಾರ್ಡ್‌ 17ರ ರವಿ ಎಸ್‌. ಜಿ. (ಪಕ್ಷೇತರ) ನೋಟಾಗಿಂತ (11) ಅತಿ ಕಡಿಮೆ 2 ಮತ ಪಡೆದು ದಾಖಲೆ ನಿರ್ಮಿಸಿದ್ದಾರೆ. ವಾರ್ಡ್‌ 19 ರಲ್ಲಿಯೂ ಜೆಡಿಎಸ್‌ನ ಎಸ್‌.ಕೆ. ಒಡೆಯರ್‌ (21) ನೋಟಾ (27) ಕಡಿಮೆ ಮತ ಗಳಿಸಿದ್ದಾರೆ. 30 ರಲ್ಲಿ ಹಾಲಮ್ಮ 23 (ನೋಟಾ 41), 33ರಲ್ಲಿ–3 ಜನ, 45ರಲ್ಲಿ ಒಬ್ಬರು ನೋಟಾಗಿಂತ ಕಡಿಮೆ ಮತ ಪಡೆದಿದ್ದಾರೆ.

ಅತೀ ಕಡಿಮೆ ಮತ:ಈ ಬಾರಿ ಅತಿ ಕಡಿಮೆ ಮತ ಪಡೆಯುವಲ್ಲಿಯೂ ಕೆಲವರು ಮುಂಚೂಣಿಯಲಿದ್ದರು.ವಾರ್ಡ್‌ 17 ಪಕ್ಷೇತರ ಅಭ್ಯರ್ಥಿ ರವಿ ಎಸ್‌.ಜಿ. ಕೇವಲ 2 ಮತ ಗಳಿಸಿದ್ದಾರೆ. ಇಲ್ಲಿ ಚಲಾವಣೆಗೊಂಡಿದ್ದು 3316 ಮತಗಳು. ಇನ್ನು ವಾರ್ಡ್‌ 4ರಲ್ಲಿ ಕಾಂಗ್ರೆಸ್‌ನ ಅಹ್ಮದ್‌ ಕಬೀರ್‌ ಖಾನ್‌ ಅತಿ ಹೆಚ್ಚು 4605 ಮತ ಪಡೆಯುವ ಮೂಲಕ ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.