ADVERTISEMENT

ಪಕ್ಷಗಳ ಕಿತ್ತಾಟ: ಬಡವಾದ ಅಧಿಕಾರಿಗಳು, ಜನ

ಕೊರೊನಾ ಸಂಕಷ್ಟದ ಕಾಲದಲ್ಲಿಯೂ ನಿಲ್ಲದ ಬಿಜೆಪಿ–ಕಾಂಗ್ರೆಸ್‌ ರಾಜಕೀಯ

ಬಾಲಕೃಷ್ಣ ಪಿ.ಎಚ್‌
Published 1 ಜುಲೈ 2021, 5:09 IST
Last Updated 1 ಜುಲೈ 2021, 5:09 IST
ಆವರಗೆರೆ ಚಂದ್ರು
ಆವರಗೆರೆ ಚಂದ್ರು   

ದಾವಣಗೆರೆ: ಕೊರೊನಾ ಎರಡನೇ ಅಲೆಯ ತೀವ್ರತೆಯು ಮೊದಲ ಅಲೆಗಿಂತ ಹೆಚ್ಚಾಗಿತ್ತು. ಅದರ ಜತೆಗೆ ಎರಡನೇ ಅಲೆಯಲ್ಲಿ ರಾಜಕೀಯ ಕಿತ್ತಾಟವೂ ಹೆಚ್ಚಾಗಿರುವುದು ಅಧಿಕಾರಿಗಳಿಗೆ ಒತ್ತಡ ತಂದಿದೆ. ರಾಜಕೀಯ ಮೇಲಾಟದಿಂದ ಕೆಲವು ಜನರಿಗೆ ಉಪಯೋಗ ಆಗಿದ್ದರೆ, ಕೆಲವು ತೊಂದರೆಯನ್ನುಂಟು ಮಾಡಿದೆ.

‘ಕೊರೊನಾ ಸೋಂಕನ್ನು ಹೇಗಾದರೂ ನಿಭಾಯಿಸಬಹುದು. ಆದರೆ ಈ ರಾಜಕಾರಣಿಗಳನ್ನು ತಡೆದುಕೊಳ್ಳುವುದೇ ಕಷ್ಟ’ ಎಂದು ಜಿಲ್ಲೆಯ ಪ್ರಮುಖ ಅಧಿಕಾರಿಯೊಬ್ಬರು ಈಚೆಗೆ ನಿಡುಸುಯ್ದಿರುವುದು ರಾಜಕೀಯಕ್ಕೆ ಸಿಲುಕಿ ಅಧಿಕಾರಿಗಳು ಬಸವಳಿದಿರುವುದಕ್ಕೆ ಸಾಕ್ಷಿಯಂತಿತ್ತು.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಅವರ ನಡುವೆ ಎರಡು ತಿಂಗಳ ಈಚೆಗೆ ಒಂದೇ ಸಮನೆ ಟೀಕೆ, ಪ್ರತಿ ಟೀಕೆಗಳು ನಡೆದವು.

ADVERTISEMENT

ಇದರ ನಡುವೆ ‘ಅವರಿಗೆ ಆಗದೇ ಇದ್ದರೆ ನಾವೇ ಲಸಿಕೆ ತಂದು ಜನರಿಗೆ ಹಾಕಿಸುತ್ತೇವೆ. ಅರ್ಧ ಹಣ ಕೊಡಲಿ’ ಎಂದು ಶಾಮನೂರು ಸವಾಲೊಡ್ಡಿದ್ದರು. ಆ ಹಣವನ್ನು ಜಿಲ್ಲಾಧಿಕಾರಿ ಖಾತೆಗೆ ಹಾಕಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ, ಉಸ್ತುವಾರಿ ಸಚಿವ ಬೈರತಿ ಬಸವರಾಜ ಪ್ರತಿ ಸವಾಲು ನೀಡಿದ್ದರು. ಈ ಪೈಪೋಟಿ ಜನರಿಗೆ ಉಪಯೋಗ ಆಗುವಂತಾಯಿತು. ಕೆ.ಬಿ. ಬಡಾವಣೆಯಲ್ಲಿ ಶಾಮನೂರು ಕುಟುಂಬ ಮತ್ತು ಸರ್ಕಾರ ಹೀಗೆ ಎರಡೂ ಕಡೆಯಿಂದ ಲಸಿಕೆ ವಿತರಣೆ ಇದೆ ಎಂದು ಜನ ಸರದಿಯಲ್ಲಿ ನಿಂತಾಗ ಸರ್ಕಾರದ ಲಸಿಕೆ ರದ್ದಾಗಿ ಜನರಿಗೆ ತೊಂದರೆಯಾಗಿತ್ತು. ಸರ್ಕಾರದ ಲಸಿಕೆ ಸರ್ಕಾರಿ ಬ್ಯಾನರ್‌ನಡಿ ನೀಡಬೇಕೇ ಹೊರತು ಖಾಸಗಿ ಬ್ಯಾನರ್‌ನಡಿ ಅಲ್ಲ ಎಂಬುದು ಬಿಜೆಪಿಯವರ ಸ್ಪಷ್ಟನೆಯಾದರೆ, ಜನರ ಜೀವ ಉಳಿಸುವಲ್ಲಿ ರಾಜಕೀಯ ಮಾಡಬಾರದು ಎಂಬುದು ಕಾಂಗ್ರೆಸ್‌ನವರ ಪ್ರತಿಕ್ರಿಯೆಯಾಗಿದೆ.

‘ಪ್ರಚಾರಕ್ಕಾಗಿ ರಾಜಕೀಯ ಮಾಡುವುದನ್ನು ಬಿಡಬೇಕು. ಜನರು ಜೀವಭಯದಿಂದ ಇದ್ದಾರೆ. ಸರ್ಕಾರವೋ ಖಾಸಗಿಯೋ ಲಸಿಕೆ ಸಿಕ್ಕಿದರೆ ಸಾಕು ಎಂದು ಇದ್ದ ಕೆಲಸ ಬಿಟ್ಟು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಅಲ್ಲಿ ಯಾವುದೇ ಅಂತರವೂ ಇರುವುದಿಲ್ಲ. ವ್ಯವಸ್ಥಿತವಾಗಿ ಲಸಿಕೆ ಹಾಕುವುದು ಹೇಗೆ? ಜನರು ಇರುವಲ್ಲಿಗೇ ಹೋಗಿ ಹಾಕಿದರೆ ಇಂಥ ಸಮಸ್ಯೆ ತಪ್ಪಿಸಬಹುದೇ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಯೋಚಿಸಬೇಕಿತ್ತು. ಆದರೆ ಆಡಳಿತ ಪಕ್ಷ, ವಿರೋಧ ಪಕ್ಷಗಳು ಕಿತ್ತಾಡುತ್ತಿವೆ. ಅವರ ನಡುವೆ ಸಿಲುಕಿರುವ ಅಧಿಕಾರಿಗಳು ಸರಿಯಾದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು.

ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಹಿಡಿತ ಇಟ್ಟುಕೊಂಡು ಜನೋಪಯೋಗಿ ಕೆಲಸ ಮಾಡಿಸಬೇಕು. ಜನಪ್ರತಿನಿಧಿಗಳೇ ಆ ಪಕ್ಷ, ಈ ಪಕ್ಷ ಎಂದು ಕಿತ್ತಾಡಿಕೊಂಡರೆ ಅಧಿಕಾರಿಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಲು ದಾರಿ ಮಾಡಿಕೊಟ್ಟಂತಾಗಿದೆ. ಯಾವುದೇ ಕೇಂದ್ರದಲ್ಲಿ ಲಸಿಕೆ ನೀಡಲು ನಿಗದಿ ಪಡಿಸಿದ ಸಮಯಕ್ಕೆ ಅಧಿಕಾರಿಗಳು ಬಂದಿರುವುದಿಲ್ಲ. ಜನರು ಮಾತ್ರ ಮುಂಜಾನೆ ಐದು ಗಂಟೆಗೆ ಎದ್ದು ಬಂದು ನಿಂತಿರುತ್ತಾರೆ. ಇದೆಲ್ಲ ಬಿಗಿ ಮಾಡಬೇಕಿದ್ದವರು ಕಿತ್ತಾಡುತ್ತ ಸಮಯ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವು ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗ ಯಾರ ಮಾತು ಕೇಳಬೇಕು ಎಂಬ ಗೊಂದಲ ಉಂಟಾಗಿದೆ. ಒಬ್ಬರ ಮಾತು ಕೇಳಿದರೆ ಮತ್ತೊಬ್ಬರಿಂದ ಬೈಸಿಕೊಳ್ಳುವ ಪರಿಸ್ಥಿತಿ ಇದೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್ ಎಂದು ರಾಜಕೀಯ ಮಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಿಸಲು ಒಂದಾಗಿ ಕೆಲಸ ಮಾಡಬೇಕು’ ಎಂದು ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಅವರ ಸಲಹೆ.

ಬಿಜೆಪಿ, ಕಾಂಗ್ರೆಸ್ ನಡುವಿನ ರಾಜಕೀಯ ಮೇಲಾಟದಲ್ಲಿ ಜನರು ತೊಂದರೆಗೆ ಸಿಲುಕಬಾರದು. ಅಧಿಕಾರಿಗಳು ಕೆಲಸ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ತಿಳಿಸಿದರು.

***

ಕೆಲಸ ಮಾಡದ ಸೋಮಾರಿ ಅಧಿಕಾರಿಗಳಿಗೆ ಬಿಜೆಪಿ–ಕಾಂಗ್ರೆಸ್‌ ಕಿತ್ತಾಟ ವರವಾಗಿದೆ. ಆದರೆ ಕೆಲಸ ಮಾಡುವವರಿಗೆ ಇರಿಸು ಮುರುಸು ಉಂಟು ಮಾಡಿದೆ.

-ಆವರಗೆರೆ ಚಂದ್ರು, ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ

***

ಕೊರೊನಾ ಸೋಂಕಿನಿಂದ ಜನರು ತತ್ತರಿಸಿ ಹೋಗಿರುವಾಗ ಓಟನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಜೆಪಿ, ಕಾಂಗ್ರೆಸ್‌ ನಿಲ್ಲಿಸಬೇಕು.

-ಜ್ಯೋತಿ ಕುಕ್ಕುವಾಡ, ಎಐಎಂಎಸ್‌ಎಸ್‌ ಜಿಲ್ಲಾ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.