ಹಳಿ ಪರೀಕ್ಷಿಸಿದ ಸಚಿವ ವಿ.ಸೋಮಣ್ಣ
ಆನಗೋಡು (ದಾವಣಗೆರೆ): ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ತಾಲ್ಲೂಕಿನ ಹೆಬ್ಬಾಳ ಗ್ರಾಮದವರೆಗೆ ಹಳಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ತೋಳಹುಣಸೆ–ಆನುಗೋಡು ನಡುವೆ ಜುಲೈನಿಂದ ಪ್ಯಾಸೆಂಜರ್ ರೈಲು ಓಡಿಸುವ ಆಲೋಚನೆ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ತಾಲ್ಲೂಕಿನ ಆನಗೋಡು ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ನೇರ ರೈಲು ಮಾರ್ಗ 2027ರ ಡಿಸೆಂಬರ್‌ಗೆ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ ನಿರ್ಮಾಣವಾಗಿರುವ ಹಳಿಯ ಮೇಲೆ ರೈಲು ಸಂಚರಿಸದೇ ಇದ್ದರೆ ತೊಂದರೆ ಆಗುತ್ತದೆ. ಕಾಮಗಾರಿ ಪೂರ್ಣಗೊಂಡ ಪ್ರಮುಖ ಸ್ಥಳಗಳ ನಡುವಿನ ಪ್ರತಿ 20 ಕಿ.ಮೀಗೆ ಒಂದು ಪ್ಯಾಸೆಂಜರ್ ರೈಲು ಓಡಿಸಲಾಗುವುದು’ ಎಂದರು.
‘ರೈಲ್ವೆ ಇಲಾಖೆಯ ತಾಂತ್ರಿಕ ಪರಿಣತರ ತಂಡ ಹಳಿಯನ್ನು ಪರಿಶೀಲಿಸಲಿದೆ. ಆ ಬಳಿಕ ರೈಲು ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿರ್ಮಾಣವಾಗಿರುವ ರೈಲು ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಸವಾಲು ಎದುರಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮೇಲಿದೆ’ ಎಂದರು.
‘ನೇರ ರೈಲು ಮಾರ್ಗ ಯೋಜನೆಗೆ 2,406 ಎಕರೆ ಭೂಮಿಯ ಅಗತ್ಯವಿದೆ. ತುಮಕೂರು ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಬಳಿ 17 ಎಕರೆ 3 ಗುಂಟೆ ಹಾಗೂ ಆನುಗೋಡು–ಹೆಬ್ಬಾಳ ನಡುವೆ 12 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.
‘ನೇರ ರೈಲು ಮಾರ್ಗವು ಮುಂಬೈವರೆಗಿನ ಕೈಗಾರಿಕಾ ಕಾರಿಡಾರ್‌ನ ಪ್ರಮುಖ ಭಾಗವಾಗುತ್ತಿದೆ. ಭವಿಷ್ಯದಲ್ಲಿ ಈ ಮಾರ್ಗದ ಭೂಮಿಗೆ ಹೆಚ್ಚಿನ ಬೆಲೆ ಬರಲಿದೆ. ರೈತರು ಆಮಿಷಗಳಿಗೆ ಬಲಿಯಾಗಿ ಭೂಮಿ ಕಳೆದುಕೊಳ್ಳಬಾರದು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ಥಳೀಯರು ತೊಂದರೆ ನೀಡಬಾರದು. ಸಿಬ್ಬಂದಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ತಪ್ಪು. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರದೀಪ್ ಪೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹಾಜರಿದ್ದರು.
ಆನಗೋಡು ರೈಲು ನಿಲ್ದಾಣ ಮುಂದೊಂದು ದಿನ ಜಂಕ್ಷನ್ ಆಗಲಿದೆ. ಹೊಳಲ್ಕೆರೆ ಮತ್ತು ವಿಜಯನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದೆ. ಈ ನಿಲ್ದಾಣವನ್ನು ಮೇಲ್ದರ್ಗೆ ಏರಿಸುವ ಅಗತ್ಯವಿದೆ.ಕೆ.ಎಸ್.ಬಸವಂತಪ್ಪ, ಶಾಸಕ ಮಾಯಗೊಂಡ
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮೋಟಾರು ಚಾಲಿತ ಟ್ರಾಲಿಯಲ್ಲಿ ಹಳಿಯ ಮೇಲೆ ಸಾಗುವ ಮೂಲಕ ಕಾಮಗಾರಿ ಪರಿಶೀಲಿಸಿದರು. ನೇರ ರೈಲು ಮಾರ್ಗದ ತೋಳಹುಣಸೆ–ಹೆಬ್ಬಾಳದ ನಡುವೆ ನಡೆದ 25 ಕಿ.ಮೀ ಹಳಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಬೆಳಿಗ್ಗೆ 6.15ಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು 11ಕ್ಕೆ ದಾವಣಗೆರೆ ತಲುಪಿದೆ. ರೈಲು ಪ್ರಯಾಣಿಕರು ಅನುಭವಿಸುವ ಸಂಕಷ್ಟವನ್ನು ಗಮನಿಸಿದೆ. ನೇರ ರೈಲು ಮಾರ್ಗ ನಿರ್ಮಾಣವಾದರೆ ಬೆಂಗಳೂರು–ದಾವಣಗೆರೆ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ’ ಎಂದರು.
* ದಾವಣಗೆರೆಯ ಲಿಂಗೇಶ್ವರ ದೇಗುಲದ ಬಳಿಯ ರೈಲು ಹಳಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು.
* ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ದಾವಣಗೆರೆ ಮಾರ್ಗವಾಗಿ ಸಂಚರಿಸಿದರೆ ಅನುಕೂಲ.
* ತೋಳಹುಣಸೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಂಡರ್‌ಪಾಸ್ ನಿರ್ಮಿಸಬೇಕು.
* ದಾವಣಗೆರೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಶೌಚಾಲಯ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು.
* ವಂದೇ ಭಾರತ್ ರೈಲು ಸಂಚಾರದ ಸಮಯ ಬದಲಾವಣೆ ಆಗಬೇಕು.
* ಹರಿಹರ ರೈಲು ನಿಲ್ದಾಣದ ಬಳಿ ಅಪಘಾತಗಳು ಹೆಚ್ಚುತ್ತಿವೆ. ಮೇಲ್ಸೇತುವೆ ಅಥವಾ ತಂತಿ ಬೇಲಿ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.