ADVERTISEMENT

ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧು: ಡಿ.ಸಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:20 IST
Last Updated 8 ಏಪ್ರಿಲ್ 2020, 16:20 IST

ದಾವಣಗೆರೆ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್‍ ಅವರು ವಿತರಿಸಿರುವ ಪಾಸ್‍ಗಳು ಅಸಿಂಧುವಾಗಿದ್ದು, ತಕ್ಷಣ ಈ ಪಾಸ್‍ಗಳನ್ನು ವಾಪಸ್ ನೀಡಬೇಕು. ಒಂದು ವೇಳೆ ಬಳಕೆ ಮಾಡಿದ್ದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೇಯರ್‍ ಅವರು ಪಾಸ್ ನೀಡಿರುವ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಮೇಯರ್ ಬಿ.ಜಿ.ಅಜಯಕುಮಾರ್‍ ಅವರನ್ನು ಜಿಲ್ಲಾಡಳಿತ ಕಚೇರಿಗೆ ಕರೆಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ ‘ಜಿಲ್ಲಾಡಳಿತಕ್ಕೆ ಪಾಸ್ ಕೇಳಿದ್ದೆವು. ಖಾಲಿಯಾಗಿದೆ ಎಂದು ತಿಳಿಸಿದಾಗ ನಾನೇ ಪಾಸ್‍ಗಳನ್ನು ಮುದ್ರಿಸಿ ನೀಡಿದೆ’ ಎಂದು ಅಜಯಕುಮಾರ್ ಒಪ್ಪಿಕೊಂಡಿದ್ದು, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ. ಉಳಿದ ಪಾಸ್‍ಗಳನ್ನು ವಾಪಸ್ ನೀಡುತ್ತೇವೆ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ‘ಮೇಯರ್‍ ಅವರು ನೀಡಿರುವ ಪಾಸ್‍ಗಳನ್ನು ಸಾರ್ವಜನಿಕರು ಬಳಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಲಾಗುವುದು. ಪಾಸ್ ಪಡೆದವರು ಮರಳಿ ಮೇಯರ್ ಕಚೇರಿಗೆ ಪಾಸ್‍ಗಳನ್ನು ನೀಡಬೇಕು. ಈ ಪಾಸ್ ಬಳಸುವವರು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದು, ತಮ್ಮ ಅಧೀನದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಸಾರ್ವಜನಿಕರು ಅವಶ್ಯಕ ಸೇವೆಗಳಿಗೆ ಪಾಸ್ ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗೆ ನೇರವಾಗಿ ಸಂಪರ್ಕಿಸಿ ಪಡೆಯಬೇಕು. ಬೇರೆಯವರಿಂದ ಪಡೆದ ಪಾಸ್‍ಗಳು ಸಿಂಧುವಲ್ಲ ಎಂದು ಸ್ಪಷ್ಟೀಕರಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.