ಜಗಳೂರು: ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸದೇ, ಅವರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
‘ಹಳ್ಳಿಗಾಡಿನ ಜನರು ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿಗಳಿಗೆ ಅಲೆದು ಸಾಕಾಗಿ, ನಮ್ಮ ಬಳಿಗೆ ಬಂದು ಕೆಲಸ ಮಾಡಿಸಿಕೊಡಿ ಎಂದು ದೂರು ಸಲ್ಲಿಸುತ್ತಾರೆ. ಪಂಚಾಯಿತಿ ವ್ಯವಸ್ಥೆಯು ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲದಷ್ಟೇ ದೊಡ್ಡ ವ್ಯವಸ್ಥೆ. ಅದನ್ನು ನಿಮ್ಮ ವ್ಯವಹಾರಗಳಿಂದ ಸಂಕುಚಿತ ಮಾಡಬೇಡಿ’ ಎಂದು ಪಿಡಿಒಗಳಿಗೆ ಬುದ್ಧಿವಾದ ಹೇಳಿದರು.
ಬಿಸ್ತುವಳ್ಳಿ ಪಂಚಾಯಿತಿಯಲ್ಲಿ ಪಿಡಿಒ, ಕಾರ್ಯದರ್ಶಿ, ಬಿಲ್‍ಕಲೆಕ್ಟರ್, ಕಂಪ್ಯೂಟರ್ ಆಪರೇಟರ್‌ಗಳು ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ ಹಾಗೂ ಅಧಿಕಾರಿಗಳು ಕೈಗೆ ಸಿಗುವುದಿಲ್ಲ ಎಂದು ಬಿಸ್ತುವಳ್ಳಿ ಗ್ರಾಮದ ಹನುಮಂತಪ್ಪ ದೂರು ನೀಡಿದರು. ಆಗ ಸ್ಥಳದಲ್ಲೇ ಇದ್ದ ಪಿಡಿಒ ಸುನೀತಾ ಅವರನ್ನು ಕರೆಸಿ, ಏನು ಸಮಸ್ಯೆ ಎಂದು ಪ್ರಶ್ನಿಸಿದರು.
‘ತಾಲ್ಲೂಕಿನ 22 ಗ್ರಾ.ಪಂ.ಗಳಿಗೆ ಕೇವಲ 9 ಪಿಡಿಒಗಳಿದ್ದಾರೆ. ಎರಡು ಮೂರು ಪಂಚಾಯಿತಿಗೆ ಕೇವಲ ಒಬ್ಬ ಅಧಿಕಾರಿ ನೇಮಿಸಲಾಗಿದೆ. ವಾರದಲ್ಲಿ ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಕಾರ್ಯನಿರ್ವಹಿಸುತ್ತೇವೆ’ ಎಂದು ಉತ್ತರಿಸಿದರು. ಕಾರ್ಯನಿರ್ವಹಿಸಿದ ಹಾಜರಾತಿ ತಂದು ತೋರಿಸಿ ಎಂದು ಎಸ್‍ಪಿ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಲೋಕಾಯುಕ್ತ ಇನ್‍ಸ್ಪೆಕ್ಟರ್ ಪ್ರಭು ಸೂರಿನ್, ಪಿ.ಸರಳಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.