ADVERTISEMENT

ದಾವಣಗೆರೆ: ‘ಮಹಾಸಂಗಮ’ಕ್ಕೆ ಜನರ ದಂಡು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 6:56 IST
Last Updated 26 ಮಾರ್ಚ್ 2023, 6:56 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಜ್ಜಿಗೆಯನ್ನು ತೆಗೆದುಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು.
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಜ್ಜಿಗೆಯನ್ನು ತೆಗೆದುಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು.   

ದಾವಣಗೆರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ‘ಮಹಾಸಂಗಮ’ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರ ದಂಡೇ ಹರಿದುಬಂದಿತ್ತು.

ಕಾರು, ಲಾರಿ, ಬಸ್‌ಗಳ ಮೂಲಕ ಲಕ್ಷಾಂತರ ಜನರು ಇಲ್ಲಿನ ಜಿಎಂಐಟಿ ಪಕ್ಕದಲ್ಲಿರುವ 400 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ವೇದಿಕೆಯತ್ತ ಬಂದರು. ಬೆಳಿಗ್ಗೆ ಸ್ವಲ್ಪಮಟ್ಟಿನ ಜನರು ಬಂದರೂ ಮಧ್ಯಾಹ್ನದ ವೇಳೆಗೆ ಆ ಸಂಖ್ಯೆ ಹೆಚ್ಚುತ್ತಾ ಹೋಯಿತು.

ದಾವಣಗೆರೆ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಬಂದಿದ್ದರು. ಬಿಜೆಪಿ ಮುಖಂಡರು, ಶಾಸಕರು ಬಸ್ ವ್ಯವಸ್ಥೆ ಮಾಡಿದ್ದರು. ಬಸ್‌ಗಳ ಮೂಲಕ ಜನರು ತಂಡೋಪತಂಡವಾಗಿ ಬಂದರು.

ADVERTISEMENT

ಬೈಕ್‌ನಲ್ಲಿ ಬಂದ ಕಾರ್ಯಕರ್ತರು ಬಿಜೆಪಿ ಬಾವುಟ ಹಾಗೂ ಕೆಂಪು ರುಮಾಲು ತೊಟ್ಟು ಬೈಕ್‌ನಲ್ಲಿ ನರೇಂದ್ರ ಮೋದಿಗೆ ಜೈಕಾರ ಹಾಕುತ್ತಾ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು.

ಕಾರ್ಯಕ್ರಮದ ವೇದಿಕೆ ಸುತ್ತ ಸೇರಿದ್ದ ಜನರು ಬಿಸಿಲು ಇದ್ದ ಕಾರಣ ಅಲ್ಲಲ್ಲಿ ಹಾಕಿದ್ದ ವಾಹನಗಳ ನಿಲುಗಡೆ ಪೆಂಡಾಲ್‌ಗಳಲ್ಲಿ ನಿಂತು ನೋಡುತ್ತಿದ್ದ ಜನರು ಜಿಎಂಐಟಿಯಲ್ಲಿ ಹೆಲಿಕಾಪ್ಟರ್‌ ಬಂದಿದ್ದನ್ನು ಕಂಡ ಕೂಡಲೇ ಕಾರ್ಯಕ್ರಮದ ವೇದಿಕೆಯತ್ತ ಓಡೋಡಿ ಬಂದರು. ಹಲವರು ಅಲ್ಲಿಯೇ ನಿಂತು ನೋಡಿದರು.

ಕಾರ್ಯಕ್ರಮಕ್ಕೆ ಸಾಗುವ ಮಾರ್ಗದಿಂದ ಜಿಎಂಐಟಿಯವರೆಗಿನ ರಸ್ತೆ ವಿಭಜಕದ ಮೇಲೂ ನಿಂತು ಜನರು ಮೋದಿಯನ್ನೂ ನೋಡಲು ಹರಸಾಹಸ ಪಡುತ್ತಿದ್ದುದು ಕಂಡುಬಂತು.

ರಾರಾಜಿಸಿದ ಫ್ಲೆಕ್ಸ್‌ಗಳು: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಎಂಐಟಿ ಕಾಲೇಜಿನವರೆಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಬಿಜೆಪಿ ಬಾವುಟಗಳು, ಫ್ಲೆಕ್ಸ್‌ ಬ್ಯಾನರ್ ರಾರಾಜಿಸಿದವು.

ಸಮಾವೇಶ ನಡೆಯುವ ಸ್ಥಳಕ್ಕೆ ಗಣ್ಯವ್ಯಕ್ತಿಗಳು ಪಿ.ಬಿ. ರಸ್ತೆಯಲ್ಲೇ ತೆರಳಬೇಕಾಗಿದ್ದರಿಂದ ಕಾರ್ಯಕರ್ತರು ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಲು ಕಷ್ಟವಾಯಿತು. ಸಮಾವೇಶಕ್ಕೆ ಬಂದ ಕಾರ್ಯಕರ್ತರಿಗೆ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನ ಮಂದಿ ಅದನ್ನು ಉಪಯೋಗಿಸಲಿಲ್ಲ.

ಮಜ್ಜಿಗೆಗೆ ಕಿತ್ತಾಟ: ಸಮಾವೇಶದಲ್ಲಿ ಬರುವ ಜನರಿಗೆ ನಗರದ ಪಿ.ಬಿ.ರಸ್ತೆಯ ಹಲವೆಡೆ ಕುಡಿಯುವ ನೀರು, ಮಜ್ಜಿಗೆ, ಬಾಳೆಹಣ್ಣು, ಬಿಸ್ಕೆಟ್‌ಗಳಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಮಜ್ಜಿಗೆ ಬಾಟೆಲ್‌ಗಳನ್ನು ಪಡೆದುಕೊಳ್ಳಲು ಮುಗಿಬಿದ್ದರು. ಜಿಲ್ಲಾಧಿಕಾರಿ ಕಚೇರಿಯ ಬಳಿ ಕೆಲವರು ಒಂದು ಬಾಕ್ಸ್‌ ಸಮೇತವೇ ಎತ್ತುಕೊಂಡು ಹೋದರು. ಕೆಲವರಿಗೆ ಸಿಗಲೇ ಇಲ್ಲ. ಕೆಲವರು ನೀರಿನ ಪೊಟ್ಟಣಗಳನ್ನು ಪಡೆದು ಅದನ್ನು ಬಳಸದೇ ವ್ಯರ್ಥ ಮಾಡಿದರು.

ವ್ಯಾಪಾರ ಅಷ್ಟಕ್ಕಷ್ಟೇ: ನಗರದ ಪಿ.ಬಿ. ರಸ್ತೆ ಬದಿಯಲ್ಲಿ ಮಜ್ಜಿಗೆ, ನೀರು ಹಾಗೂ ಹಣ್ಣಗಳನ್ನು ಉಚಿತವಾಗಿ ವಿತರಣೆ ಮಾಡಿದ್ದರಿಂದ ರಸ್ತೆ ಬದಿಯ ವ್ಯಾಪಾರಿಗಳಿಗೆ ನಿರೀಕ್ಷಿಸಿದ ಮಟ್ಟದಲ್ಲಿ ವ್ಯಾಪಾರವಾಗಲಿಲ್ಲ. ಆದರೆ ಸಮಾವೇಶ ನಡೆಯುವ ಸ್ಥಳಗಳಲ್ಲಿ ಗುಟ್ಕಾ, ಕಡಲೇಕಾಯಿ, ಬಾಳೆಹಣ್ಣು, ಸೌತೇಕಾಯಿ, ಸೀಬೆಹಣ್ಣು, ನೀರು, ಜ್ಯೂಸ್, ಐಸ್‌ಕ್ರೀಂ, ಲಿಂಬು ಸೋಡಾ ವ್ಯಾಪಾರ ನಿರೀಕ್ಷಿಸಿದ ಮಟ್ಟದಲ್ಲಿ ಇರಲಿಲ್ಲ.

ಮೋದಿಗೆ ಜೈಕಾರ: ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ಪ್ರಧಾನಿ ಬರುತ್ತಿದ್ದಂತೆಯೇ ಜೈಕಾರ ಕೂಗಿದರು. ವೇದಿಕೆಯ ಹೊರಗಡೆ ಇದ್ದ ಜನರು ಎಲ್‌ಇಡಿ ಪರದೆಯಲ್ಲಿಯೇ ನರೇಂದ್ರ ಮೋದಿ ಅವರನ್ನು ನೋಡಿ ಖುಷಿಪಟ್ಟರು. ಮೋದಿ ಅವರು ಭಾಷಣ ಮಾಡಲು ವೇದಿಕೆಗೆ ಬರುತ್ತಿದ್ದಂತೆ, ಕೆಲವು ಕಾರ್ಯಕರ್ತರು ಪಿ.ಬಿ.ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳ ಬಳಿ ಬಂದು ನಿಂತು ಅಲ್ಲಿಯೇ ಭಾಷಣವನ್ನು ಆಲಿಸಿದರು. ಕೆಲ ಸಮಯ ಧ್ವನಿವರ್ಧಕ ಕೆಟ್ಟಿತ್ತು. ಬಳಿಕ ಸರಿಹೋಯಿತು.

ಬಿಗಿ ಭದ್ರತೆ: ಮಹಾಸಂಗಮ ಸಮಾರಂಭದ ಸ್ಥಳದ ಸುತ್ತಲೂ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು. ನಾಲ್ವರು ಎಸ್‌ಪಿ, 32 ಡಿವೈಎಸ್‌ಪಿ, 85 ಪೊಲೀಸ್ ಇನ್‌ಸ್ಪೆಕ್ಟರ್, 900 ಗೃಹ ರಕ್ಷಕ ದಳದವರು ಸೇರಿ 4,000 ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.