ADVERTISEMENT

ಸಾಧನೆ, ಸಿದ್ಧಿಗೆ ರಂಗ ಮುಖ್ಯವಲ್ಲ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 17:30 IST
Last Updated 12 ಡಿಸೆಂಬರ್ 2019, 17:30 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ಸನ್ಮಾನಿಸಲಾಯಿತು
ದಾವಣಗೆರೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ಸಾಧನೆ, ಸಿದ್ಧಿಗೆ ರಂಗ ಮುಖ್ಯವಲ್ಲ. ಛಲವಿದ್ದರೆ ಯಾವುದೇ ರಂಗದಲ್ಲಿ ಸಾಧನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾ ಗೃಹರಕ್ಷಕ ದಳದಿಂದ ಗುರುವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

ಅಧಿಕಾರ ಇದ್ದರೆ ಮಾತ್ರ ಉತ್ತಮ ಕೆಲಸ ಮಾಡಬಹುದೆಂದು ಭಾವಿಸಬಾರದು. ಸಣ್ಣ ಹುದ್ದೆಯಲ್ಲಿರುವವರೂ ಅದ್ವಿತೀಯ ಕೆಲಸ ಮಾಡಿರುವುದನ್ನು ಕಾಣಬಹುದು. ಕನಿಷ್ಠ ಎಂಬ ಭಾವ ತೊರೆದು, ಸಾಧನೆ ಮಾಡಬೇಕು ಎಂಬ ಹಠ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಅನೇಕರಿಗೆ ಖಾಕಿ ಸಮವಸ್ತ್ರ ಹಾಕಬೇಕೆಂಬ ಕ್ರೇಜ್ ಇರುತ್ತದೆ. ಆದರೆ ಎಲ್ಲರಿಗೂ ಖಾಕಿ ಹಾಕುವ ಅವಕಾಶ ಸಿಗುವುದಿಲ್ಲ. ಆದರೆ ನಿಮಗೆ ಈ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ಗೃಹ ರಕ್ಷಕ ದಳವು ಲಾಭದ ಆಸೆಯಿಲ್ಲದೆ ದೇಶ ಸೇವೆಗೆ ನಿಂತ ಸಂಸ್ಥೆ. ದೇಶದ, ಸಮಾಜದ ರಕ್ಷಣೆಗಾಗಿ ಸೇವೆ ಸಲ್ಲಿಸುವವರು ನೀವು ಎಂದು ಅಭಿನಂದಿಸಿದರು.

ಡಿವೈಎಸ್‌ಪಿ ನಾಗೇಶ್ ಐತಾಳ್, ‘ ಉತ್ತಮ ಸಮವಸ್ತ್ರ ಇದ್ದರೆ ಪೊಲೀಸರಿಗೆ ಸಿಗುವ ಗೌರವ ನಿಮಗೂ ಸಿಗುತ್ತದೆ. ಹಿಂದೆಲ್ಲ ಗಣೇಶೋತ್ಸವ, ರಂಜಾನ್‌, ಚುನಾವಣೆಗೆ ಮಾತ್ರ ನಿಮ್ಮ ಸೇವೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಎಲ್ಲ ಬಂದೋಬಸ್ತು, ಕಾನೂನು ಸುವ್ಯವಸ್ಥೆ ಕಾರ್ಯಕ್ಕೆ ನೀವು ಬೇಕಾಗಿದೆ. ಹಾಗಾಗಿ ವರ್ಷದಲ್ಲಿ ಆರು ತಿಂಗಳು ನಿಮಗೆ ಕೆಲಸ ಸಿಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಇರುವ ಸಿಬ್ಬಂದಿ ಕೊರತೆಯನ್ನು ನಿಮ್ಮ ಸೇವೆಯ ಮೂಲಕ ನೀಗಿಸಿಕೊಳ್ಳಲು ನಿರ್ಧಾರವಾದರೆ ವರ್ಷಪೂರ್ತಿ ನಿಮಗೆ ಕೆಲಸ ಸಿಗಲಿದೆ’ ಎಂದು ತಿಳಿಸಿದರು.

ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಬಿ.ಎಚ್. ವೀರಪ್ಪ, ‘ಹರಿಹರ ತಾಲ್ಲೂಕಿನ ದೇವರಬೆಳೆಕೆರೆಯಲ್ಲಿ ₹ 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾದೇಶಿಕ ತರಬೇತಿ ಕೇಂದ್ರವು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಲೋಕಾರ್ಪಣೆಗೊಳ್ಳಬೇಕು’ ಎಂದು ಮನವಿ ಮಾಡಿದರು.

ಉತ್ತಮ ಸೇವೆ ಸಲ್ಲಿಸಿದ ಹಾಗೂ ನಿವೃತ್ತಿ ಹೊಂದಿದ ಗೃಹರಕ್ಷಕರನ್ನು ಸನ್ಮಾನಿಸಲಾಯಿತು. ನ್ಯಾಮತಿ ಘಟಕದ ಘಟಕಾಧಿಕಾರಿ ಎಂ.ರಾಘವೇಂದ್ರ ವಾರ್ಷಿಕ ವರದಿ ವಾಚಿಸಿ, 5 ಮುಖ್ಯಮಂತ್ರಿ ಪದಕಗಳು ಮತ್ತು 6 ರಾಷ್ಟ್ರಪತಿ ಪದಕ ಸೇರಿ ಒಟ್ಟು 11 ಪದಕಗಳನ್ನು ಜಿಲ್ಲೆಯ ಗೃಹರಕ್ಷಕರು ಪಡೆದಿದ್ದಾರೆ. ಜಿಲ್ಲೆಯ 9 ಘಟಕಗಳಲ್ಲಿ 640 ಗೃಹರಕ್ಷಕರು ಕಾರ್ಯನಿರ್ಹಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ದಾವಣಗೆರೆ ಘಟಕಾಧಿಕಾರಿ ಅಮರೇಶ್ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಕೆ.ಸರಸ್ವತಿ ಪ್ರತಿಜ್ಞಾವಿಧಿ ಬೋಧಿಸಿದರು. ಪೊಲೀಸ್ ಸಿಬ್ಬಂದಿ ದೇವರಾಜ್ ಹಾಗೂ ಶೈಲಜಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.