ADVERTISEMENT

ಪರ್ಯಾಯ ಬೆಳೆ ಬೆಳೆದು ಲಾಭ ಗಳಿಸಿ: ವಿಜ್ಞಾನಿ ಎಂ.ಜಿ. ಬಸವನಗೌಡ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:54 IST
Last Updated 16 ಅಕ್ಟೋಬರ್ 2025, 5:54 IST
ಸಾಗರಪೇಟೆಯ ತುಮ್ಕೋಸ್ ಕಚೇರಿಯಲ್ಲಿ ಬುಧವಾರ ನಡೆದ ವಿಚಾರ ಸಂಕಿರಣವನ್ನು ವಿಜ್ಞಾನಿ ಎಂ.ಜಿ. ಬಸವನ ಗೌಡ ಉದ್ಘಾಟಿಸಿದರು
ಸಾಗರಪೇಟೆಯ ತುಮ್ಕೋಸ್ ಕಚೇರಿಯಲ್ಲಿ ಬುಧವಾರ ನಡೆದ ವಿಚಾರ ಸಂಕಿರಣವನ್ನು ವಿಜ್ಞಾನಿ ಎಂ.ಜಿ. ಬಸವನ ಗೌಡ ಉದ್ಘಾಟಿಸಿದರು   

ಬಸವಪಟ್ಟಣ: ರೈತರು ಅಡಿಕೆ ಬೆಳೆಯ ಆರಂಭದ ಕಾಲದಲ್ಲಿ ಬೆಳೆಯ ಮಧ್ಯೆ ವಿವಿಧ ಪರ್ಯಾಯ ಬೆಳೆಗಳನ್ನು ಬೆಳೆದು ಲಾಭಗಳಿಸುವುದರೊಂದಿಗೆ ಅಡಿಕೆ ಫಸಲಿಗೆ ಪೋಷಕಾಂಶಗಳನ್ನು ನೀಡುವ ಕಾರ್ಯ ಕೈಗೊಳ್ಳಬೇಕೆಂದು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.

ಅವರು ಸಮೀಪದ ಸಾಗರಪೇಟೆಯ ತುಮ್‌ಕೋಸ್‌ ಕಚೇರಿಯಲ್ಲಿ ಬುಧವಾರ ನಡೆದ ಅಡಿಕೆ ಬೆಳೆಯಲ್ಲಿ ಪರ್ಯಾಯ ಬೆಳೆಗಳು ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಅಂದಾಜು 40 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅಡಿಕೆ ಸಸಿಗಳನ್ನು ನಾಟಿ ಮಾಡಿದ ನಂತರ ಅದರ ಮಧ್ಯ ಭಾಗದಲ್ಲಿ ಹಸಿ ಮೆಣಸು, ಬಾಳೆ, ತೊಗರಿ, ಅವರೆ, ಹೆಸರು, ಉದ್ದು ಮುಂತಾದ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು.

ADVERTISEMENT

ತಮ್ಮ ತೋಟದ ಮಣ್ಣಿನ ಪರೀಕ್ಷೆ ಮಾಡಿಸದೇ ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರಗಳನ್ನು ಫಸಲಿಗೆ ನೀಡಬಾರದು. ಕೃಷಿ ತಜ್ಞರು ಶಿಫಾರಸ್ಸು ಮಾಡುವ ರಾಸಾಯನಿಕ ಗೊಬ್ಬರಗಳನ್ನು ಮಾತ್ರ ನಿರ್ದಿಷ್ಟ ಪ್ರಮಾಣದಲ್ಲಿ ಬಳಸಿ. ಇತ್ತೀಚಿಗೆ ಕುರಿ ಗೊಬ್ಬರದಲ್ಲಿ ಸಾಕಷ್ಟು ನಕಲಿ ಗೊಬ್ಬರವನ್ನು ರೈತರಿಗೆ ನೀಡಿ ಮೋಸಗೊಳಿಸಲಾಗುತ್ತಿದೆ. ಆದ್ದರಿಂದ ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತವನ್ನು ಮಾತ್ರ ಬಳಸಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದರೊಂದಿಗೆ ಅಡಿಕೆ ಫಸಲಿಗೆ ಬರುವ ರೋಗಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕ ಎಂದು ತಿಳಿಸಿದರು.

ತುಮ್ಕೋಸ್ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಮಧು ಮಾತನಾಡಿ, ಚನ್ನಗಿರಿ ತಾಲ್ಲೂಕಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಬೆಳೆಯುತ್ತಿರುವ ಅಡಿಕೆ ಬೆಳೆಯನ್ನು ಪ್ರೋತ್ಸಾಹಿಸಲು ತುಮ್ಕೋಸ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ರೈತರು ಬೆಳೆದ ಅಡಿಕೆಗೆ ಉತ್ತಮ ದರವನ್ನು ನೀಡುವುದರೊಂದಿಗೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು, ಚನ್ನಗಿರಿ ಪಟ್ಟಣದಲ್ಲಿನ ಮುಖ್ಯ ಖರೀದಿ ಕೇಂದ್ರದೊಂದಿಗೆ ಬಸವಾಪಟ್ಟಣ, ಸಂತೇಬೆನ್ನೂರು, ಹೊಳಲ್ಕೆರೆ, ಹೊನ್ನಾಳಿ,ತಾವರೆಕೆರೆ, ತರೀಕೆರೆ,ಅರೆತೋಳ್‌ ಕೈಮರಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ರೈತರಿಗೆ ಅಗತ್ಯವಾದ ಕೃಷಿ ಉಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟವನ್ನು ಮಾಡಲಾಗುತ್ತಿದೆ ಎಂದರು.

ಅಡಿಕೆ ಬೆಳೆಗಾರರಾದ ಶಂಕರಪಾಟೀಲ್‌, ಬಿ.ಜಿ. ರುದ್ರೇಶ್‌, ಜಿ.ಬಿ. ಜಗನ್ನಾಥ್‌ ಹಾಗೂ ವಿವಿಧ ಗ್ರಾಮಗಳ ನೂರಾರು ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.