ADVERTISEMENT

‘ವ್ಯಕ್ತಿತ್ವದಿಂದಷ್ಟೇ ವ್ಯಕ್ತಿ ದೊಡ್ಡವನಾಗಲು ಸಾಧ್ಯ’

ಡಾ. ಉದಯ ಶಂಕರ ಪುರಾಣಿಕರಿಗೆ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:10 IST
Last Updated 31 ಜನವರಿ 2021, 4:10 IST
ದಾವಣಗೆರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಡೇಟಾ ವಿಜ್ಞಾನಿ ಡಾ.ಉದಯ ಶಂಕರ ಪುರಾಣಿಕ ಅವರಿಗೆ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಾವಣಗೆರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಡೇಟಾ ವಿಜ್ಞಾನಿ ಡಾ.ಉದಯ ಶಂಕರ ಪುರಾಣಿಕ ಅವರಿಗೆ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ದಾವಣಗೆರೆ: ‘ಯಾವೊಬ್ಬ ವ್ಯಕ್ತಿಯೂ ಹಣ, ಅಧಿಕಾರದಿಂದ ದೊಡ್ಡವನಾಗುವುದಿಲ್ಲ. ಬದಲಾಗಿ ಆತನಲ್ಲಿರುವ ವ್ಯಕ್ತಿತ್ವದಿಂದಾಗಿ ದೊಡ್ಡವನಾಗಲು ಸಾಧ್ಯ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು, ಸಾಹಿತಿಗಳು, ಮಠಾಧೀಶರು, ಲೇಖಕರು ಅಥವಾ ದೊಡ್ಡ ಹುದ್ದೆಗಳಲ್ಲಿ ಇದ್ದವರು ಅವರು ದೊಡ್ಡವ್ಯಕ್ತಿಗಳಾಗಲು ಸಾಧ್ಯವಿಲ್ಲ. ಹಣ ಬಂದ ಹಾಗೆ ಮನುಷ್ಯತ್ವ ಮತ್ತು ಆದರ್ಶಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವುದನ್ನು ಕಾಣುತ್ತೇವೆ. ಆದರೆ, ಮಾಗನೂರು ಬಸಪ್ಪನವರು ಕೊನೆವರೆಗೂ ತಮ್ಮ ಆದರ್ಶವನ್ನು ಉಳಿಸಿಕೊಂಡು ಬಂದರು’ ಎಂದು ಹೇಳಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಹಾಗೂ ವಿಜ್ಞಾನಿಡಾ. ಉದಯಶಂಕರ ಪುರಾಣಿಕ, ‘ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಮಾಡಲು ಹೊರಟಿರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಹೈದರಾಬಾದ್ ಕರ್ನಾಟಕ ಮುಕ್ತವಾಗಿರಲಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ ನಂತರ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆಯಿತು. ಹೀಗಿರುವಾಗ ಉತ್ಸವ ಎಂಬ ಪದ ಬಳಸಿದರೆ, ಇದಕ್ಕಾಗಿ ನಡೆದಿರುವ ಹೋರಾಟಕ್ಕೆ ಅರ್ಥ ಬರಲಿದೆಯೇ’ ಎಂದು ಪ್ರಶ್ನಿಸಿದರು.

‘ಹೈದರಾಬಾದ್ ಕರ್ನಾಟಕ ವಿಮೋಚನೆ ಆಗದಿದ್ದರೆ ಇಂದು ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. ನಮ್ಮ ಕುಟುಂಬದವರು ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಹೋರಾಟ ನಡೆಸಿದ್ದಾರೆ. ಜತೆಗೆ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಾಲ್ಯವಿವಾಹ ವಿರುದ್ಧ ಹೋರಾಟ, ಕ್ವಿಟ್ ಇಂಡಿಯಾ ಚಳವಳಿಯನ್ನು ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಸಿ ಸೆರೆವಾಸ ಅನುಭವಿಸಿದ್ದಾರೆ.ಇಂತಹ ದೊಡ್ಡ ಹೋರಾಟದ ಬಗ್ಗೆ ರಾಜ್ಯ ಸರ್ಕಾರ ಇದುವರೆಗೂ ಅಧಿಕೃತವಾಗಿ ದಾಖಲಿಸಿ ಪುಸ್ತಕ ಪ್ರಕಟಿಸಿಲ್ಲ. ರಾಜ್ಯದಲ್ಲಿ ಎಷ್ಟೆಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕನ್ನಡ ಸಂಘಟನೆಗಳಿದ್ದರೂ ಈ ಕೆಲಸ ಆಗಿಲ್ಲ’ ಎಂದು ವಿಷಾದಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಎ.ಆರ್.ಉಜಿನಪ್ಪ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಲಿಂಗಯ್ಯ ಬಿ. ಹಿರೇಮಠ, ರಾಜಶೇಖರ ಅಂಗಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.