ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಫೋನ್‌ ಇನ್‌

ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ, ಮುಂದಿನ ವರ್ಷವೂ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 9:06 IST
Last Updated 16 ಮಾರ್ಚ್ 2020, 9:06 IST
ಸಿ.ಆರ್‌. ಪರಮೇಶ್ವರಪ್ಪ
ಸಿ.ಆರ್‌. ಪರಮೇಶ್ವರಪ್ಪ   

ದಾವಣಗೆರೆ: ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಆರಂಭಿಸಿರುವ ವಿದ್ಯಾರ್ಥಿಗಳ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಫೋನ್‌ ಇನ್‌ನಲ್ಲಿ ನಗರ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಇಂಗ್ಲಿಷ್‌, ಗಣಿತ, ವಿಜ್ಞಾನ ಸೇರಿ ಎಲ್ಲ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಕೋಲಾರ, ಮುದ್ದೆಬಿಹಾಳ ಸೇರಿ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳೂ ಫೋನ್‌ ಮಾಡಿರುವುದು ವಿಶೇಷ. ಸಾಮಾಜಿಕ ಜಾಲತಾಣಗಳ ಮೂಲಕ ಇತರೆ ಜಿಲ್ಲೆಗಳಿಗೂ ಶಿಕ್ಷಕರ ಫೋನ್‌ ನಂಬರ್‌ ಹಂಚಿಕೆಯಾಗಿರುವುದು ಗಮನಾರ್ಹ.

ಎಲ್ಲೆಡೆಯಿಂದ ಕರೆ ಬರುತ್ತಿದ್ದು, ಇಲಾಖೆ ಹಾಗೂ ಸಂಘದ ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಾರ್ಚ್‌ 27ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಆಯಾ ವಿಷಯಗಳ ಪರೀಕ್ಷೆ ಮುಗಿಯುವವರೆಗೂ ಫೋನ್‌ ಇನ್‌ ನಡೆಯಲಿದೆ.

ADVERTISEMENT

ಪ್ರತಿದಿನ ತಲಾ ಒಬ್ಬೊಬ್ಬ ಶಿಕ್ಷಕರಿಗೆ 4ರಿಂದ 5 ಕರೆಗಳು ಬರುತ್ತಿವೆ. ಈ ಮೊದಲು ಪ್ರತಿ ಸೋಮವಾರ, ಮಂಗಳವಾರ, ಬುಧವಾರ ಸಂಜೆ 6.30 ರಿಂದ 7.30 ರವರೆಗೆ ಕರೆ ಸ್ವೀಕರಿಸಲಾಗುತ್ತಿತ್ತು. ಆದರೆ ಈಗ ಶಿಕ್ಷಕರೇ ಸ್ವಯಂ ಪ್ರೇರಣೆಯಿಂದ ನಿಮಗೆ ಪ್ರಶ್ನೆ ಉದ್ಭವವಾದರೆ ಪ್ರತಿದಿನ ಕರೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.ಕನ್ನಡಕ್ಕೆ–4, ಇಂಗ್ಲಿಷ್‌–5, ಹಿಂದಿ–4, ಗಣಿತ–5, ವಿಜ್ಞಾನ–4, ಸಮಾಜ ವಿಜ್ಞಾನ–5 ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಫೋನ್‌ನಲ್ಲಿ ತಿಳಿಸಲಾಗದ ಪ್ರಶ್ನೆಗಳಿಗೆ ಉತ್ತರವನ್ನು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮಾಡುವ ಮೂಲಕ ಅವರ ಸಮಸ್ಯೆ ಪರಿಹರಿಸಲು ಒತ್ತು ನೀಡುತ್ತಿದ್ದಾರೆ.

ಬಹುತೇಕ ವಿದ್ಯಾರ್ಥಿಗಳು ಈ ಪಾಠ ನಮಗೆ ಅರ್ಥವಾಗುತ್ತಿಲ್ಲ. ಗಣಿತದ ಸೂತ್ರ ಬಿಡಿಸುವುದು ಹೇಗೆ. ಈ ಬಾರಿ ಯಾವ ಪ್ರಶ್ನೆಗಳು ಬರುತ್ತವೆ.ಯಾವ ಪ್ರಶ್ನೆಗೆ ಎಷ್ಟು ಅಂಕ ಇದೆ ಎಂಬ ಬಗ್ಗೆಯೇ ಹೆಚ್ಚು ಪ್ರಶ್ನೆ ಕೇಳಿದ್ದಾರೆ.

ವಿಜ್ಞಾನದಲ್ಲಿ ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲಾವಣೆಯಾದ ಬಗ್ಗೆ, 5 ಅಂಕಕ್ಕೆ ಯಾವುದರ ಮೇಲೆ ಪ್ರಶ್ನೆ ಬರಬಹುದು ಎಂದು ಕೇಳುತ್ತಿದ್ದಾರೆ. ಸರಳ ವಿಧಾನದಲ್ಲಿ ಉತ್ತರಿಸುವ ಬಗ್ಗೆ, ಹೇಗೆ ನೆನಪಿನಲ್ಲಿಟ್ಟುಕೊಳ್ಳಬಹುದು ಎಂಬ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಬಂದಿವೆ.ಇಂಗ್ಲಿಷ್‌ನಲ್ಲಿ ವ್ಯಾಕರಣ, ಚಿತ್ರ ಓದುವುದು, ಕಥೆಯ ವಿಸ್ತರಣೆ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ದಾರೆ.

ಪ್ರಶ್ನೆ ಕೇಳಿದರೆ ತಮ್ಮ ಶಾಲೆಯ ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲ ಎಂಬ ಭಾವನೆ ಬರಬಹುದು ಎಂಬ ಮನೋಭಾವದಿಂದ ಕೆಲವರು ಕರೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ಹೇಳಿದರು.

ಉತ್ತಮ ಸ್ಪಂದನೆ ಇದೆ.ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿದೆ. ಇದನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್‌. ರಾಮಕೃಷ್ಣ ಶ್ರೇಷ್ಠಿ ತಿಳಿಸಿದರು.

ಇದಲ್ಲದೆ ಮಾರ್ಚ್‌ 9ರಿಂದ 12ರವರೆಗೆ ಶಿಕ್ಷಣ ಇಲಾಖೆಯಿಂದ ಫೋನ್‌ ಇನ್‌ ಕಾರ್ಯಕ್ರಮ ನಡೆಸಲಾಗಿತ್ತು. ಅದಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.