ADVERTISEMENT

ಹಂದಿ ದಾಳಿ: ಇಬ್ಬರು ಬಾಲಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:07 IST
Last Updated 22 ಫೆಬ್ರುವರಿ 2020, 13:07 IST

ಹರಿಹರ: ಇಲ್ಲಿನ ಕಾಳಿದಾಸ ನಗರದ 3ನೇ ಕ್ರಾಸ್‍ನ ಅಂಜುಮನ್ ಶಾದಿ ಮಹಲ್ ಸಮೀಪ ಇಬ್ಬರು ಬಾಲಕರ ಮೇಲೆ ಶನಿವಾರ ಬೆಳಿಗ್ಗೆ ಹಂದಿಗಳು ದಾಳಿ ನಡೆಸಿ, ಗಾಯಗೊಳಿಸಿವೆ.

ಕಾಳಿದಾಸ ನಗರದ ಒಂದು ವರ್ಷದ ಕೌಶಿಕ್‍ ಹಾಗೂ ಮೂರು ವರ್ಷದ ಫರ್ಹಾನ್‍ ಗಾಯಗೊಂಡ ಬಾಲಕರು.

ತಮ್ಮ ಮನೆಯ ಮುಂದೆ ಉಪಾಹಾರ ಸೇವಿಸುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿದ ಹಂದಿಗಳು, ತೊಡೆ ಹಾಗೂ ಬೆನ್ನಿಗೆ ಕಚ್ಚಿದೆ. ತಕ್ಷಣವೇ ಸ್ಥಳೀಯರು ಹಂದಿಗಳಿಂದ ಮಕ್ಕಳನ್ನು ರಕ್ಷಿಸಿ, ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

‘20 ದಿನಗಳ ಹಿಂದೆ ನೇಹಾ ಎಂಬ ಬಾಲಕಿಯ ಮೇಲೆ ಹಂದಿಗಳು ದಾಳಿ ನಡೆಸಿದ್ದವು. ಆರೋಗ್ಯ ನಿರೀಕ್ಷಕರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ಆಗಲೇ ಕ್ರಮ ಜರುಗಿಸಿದ್ದರೆ ಈ ಅನಾಹುತವನ್ನು ತಡೆಗಟ್ಟಬಹುದಾಗಿತ್ತು’ ಎಂದು ನಗರಸಭೆ ಸದಸ್ಯ ಮಹಬೂಬ್ ಬಾಷಾ ದೂರಿದರು.

ಎಚ್ಚೆತ್ತ ನಗರಸಭೆ: ಶನಿವಾರ ಬಾಲಕರ ಮೇಲೆ ಹಂದಿ ದಾಳಿ ನಡೆಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು, ಹಂದಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದರು. ನೂರಾರು ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.