ADVERTISEMENT

ಕೊಲೆ ಎಂದು ಬೆಸ್ತು ಬೀಳಿಸಿ,ಪೊಲೀಸರನ್ನೇ ದಾರಿ ತಪ್ಪಿಸಿದ್ದ ಯುವಕ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:51 IST
Last Updated 19 ಮೇ 2019, 11:51 IST
ಪರಶುರಾಮ
ಪರಶುರಾಮ   

ದಾವಣಗೆರೆ: ಯುವಕನ ಕೊಲೆಯಾಗಿದೆ ಎಂದು ತನ್ನ ಮುಖಕ್ಕೆ ಕುಂಕುಮದ ನೀರು ಹಾಕಿ, ಸತ್ತು ಬಿದ್ದವರಂತೆ ಮಲಗಿ ಸೆಲ್ಫಿ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಕಳುಹಿಸಿದ್ದ ಯುವಕನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ 10 ದಿನಗಳ ಒಳಗೆ ಮೂರು ಕೊಲೆಗಳು ನಡೆದಿದ್ದ ಕಾರಣ ಮೊದಲೇ ಒತ್ತಡದಲ್ಲಿದ್ದ ಪೊಲೀಸರು ಈ ‘ಕೊಲೆ’ಯಿಂದ ಇನ್ನಷ್ಟು ತಲೆಬಿಸಿಯಲ್ಲಿದ್ದರು. ಇದು ನಕಲಿ ಕೊಲೆ ಎಂಬುದನ್ನು ಪತ್ತೆ ಹಚ್ಚಿ ಸ್ವಲ್ಪ ನಿರುಮ್ಮಳರಾದರು.

ಯಲ್ಲಮ್ಮ ನಗರದ 12ನೇ ಕ್ರಾಸ್‌ ನಿವಾಸಿ ಪರಶುರಾಮ ಎಂಬ ಯುವಕನೇ ಪೊಲೀಸರನ್ನೂ, ಸಾರ್ವಜನಿಕರನ್ನೂ ಈ ರೀತಿ ದಾರಿ ತಪ್ಪಿಸಿದವನು.

ಶನಿವಾರ ಕತ್ತಲಾಗುತ್ತಿದ್ದಂತೆ ಮಾಧ್ಯಮ, ಪೊಲೀಸರು ಸೇರಿ ಎಲ್ಲರ ಮೊಬೈಲ್‌ಗಳಿಗೆ ಕೊಲೆಯಾದ ಯುವಕನ ಫೋಟೊವೊಂದು ಫಾರ್ವರ್ಡ್‌ ಆಗಿತ್ತು. ರಕ್ತಸಿಕ್ತವಾದ ಮುಖದ ಜತೆಗೆ ಪರುಶರಾಮ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಒಕ್ಕಣೆ ಅದರ ಜತೆಗೆ ಇತ್ತು. ಈ ಸಂದೇಶದ ಮೂಲ ಯಾವುದು ಎಂದು ಹುಡುಕಿ ಆ ನಂಬರ್‌ಗೆ ಕರೆ ಮಾಡಿದರೆ ಸ್ವಿಚ್‌ಡ್‌ ಆಫ್‌ ಬರುತ್ತಿತ್ತು. ಅದಕ್ಕೆ ಸರಿಯಾಗಿ ಪರಶುರಾಮ ಕಾಣೆಯಾಗಿದ್ದಾನೆ ಎಂದು ಆತನ ಹೆತ್ತವರು ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಭಾನುವಾರ ಆ ಮೊಬೈಲ್‌ ಆನ್‌ ಆದಾಗ ಪೊಲೀಸರು ಪತ್ತೆ ಹಚ್ಚಿ ಪರಶುರಾಮನನ್ನು ಹಿಡಿದುಕೊಂಡು ಬಂದಿದ್ದಾರೆ. ವಿಚಾರಣೆ ನಡೆಸಿದಾಗ ಆತನೇ ಕುಂಕುಮವನ್ನು ನೀರಲ್ಲಿ ಕಲಸಿ ಹಾಕಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಗೆಳೆಯನೊಬ್ಬನಿಗೆ ಕಳುಹಿಸಿದ್ದೆ. ಆತ ವೈರಲ್‌ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.