ADVERTISEMENT

ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:45 IST
Last Updated 19 ಫೆಬ್ರುವರಿ 2026, 2:45 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ನ್ಯಾಮತಿ: ತಾಲ್ಲೂಕಿನ ಭಾಯಾಗಡ್‌ನಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂರಗೊಂಡನಕೊಪ್ಪದಲ್ಲಿ ಫೆ.14ರಂದು ನಡೆದ ಕಾರ್ಯಕ್ರಮದಲ್ಲಿ ಕೆಲ ಯುವಕರು ಕಪ್ಪುಬಟ್ಟೆ ಪ್ರದರ್ಶಿಸಿ ಉಪಮುಖ್ಯಮಂತ್ರಿ ವಿರುದ್ಧ ‘ಗೋ ಬ್ಯಾಕ್‌’ ಘೋಷಣೆ ಕೂಗಿದ್ದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ಇದರಿಂದ ಸಮಾರಂಭದಲ್ಲಿ ಗೊಂದಲ, ಆತಂಕ ಸೃಷ್ಟಿಯಾಗಿತ್ತು. ಆಕ್ರೋಶಭರಿತ ಯುವಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿ ಪೊಲೀಸರು ವಿಫಲರಾಗಿದ್ದರು. ಕಪ್ಪುಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದ 25ರಿಂದ 30 ಯುವಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ಹಿಂಪಡೆಯಲು ಆಗ್ರಹ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಿದ ಯುವಕರ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಅಧ್ಯಕ್ಷ‌ ಮಂಜುನಾಯ್ಕ ಆಗ್ರಹಿಸಿದರು.

‘ಒಳಮೀಸಲಾತಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಆಕ್ರೋಶ ಮಡುಗಟ್ಟಿದೆ. ಉಪಮುಖ್ಯಮಂತ್ರಿ ವೇದಿಕೆಗೆ ಆಗಮಿಸಿದಾಗ ಅದು ಸ್ವಾಭಾವಿಕವಾಗಿ ಸ್ಫೋಟಗೊಂಡಿತು. ಇದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಲ್ಲ. ಧಾರ್ಮಿಕ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಬಂದ ಮಾಲಾಧಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಖಂಡನೀಯ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಕಪ್ಪುಬಟ್ಟೆ ಪ್ರದರ್ಶನ ಮಾಡಿರುವುದನ್ನು ಮಹಾ ಅಪರಾಧ ಎಂಬಂತೆ ಪೊಲೀಸರು ಬಿಂಬಿಸುತ್ತಿದ್ದಾರೆ. ಕಠಿಣ ಸೆಕ್ಷನ್‌ಗಳನ್ನು ಹಾಕಿ ಕಿರುಕುಳ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಜಾರ ಸಮುದಾಯದ ಯುವಕರು ಬಂಧನ ಭೀತಿ ಎದುರಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬಂಜಾರ ಹೋರಾಟ ಸಮಿತಿಯ ಮುಖಂಡರಾದ ಕೆ. ತಾರೇಶ್, ಕುಮಾರ ನಾಯ್ಕ, ಈಶ್ವರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.