
ದಾವಣಗೆರೆ: ‘ಪೊಲೀಸರು ಕೈಗೊಳ್ಳುವ ತನಿಖೆಗಳು ಆತ್ಮಸಾಕ್ಷಿಯಿಂದ ಕೂಡಿರಲಿ. ನ್ಯಾಯದಾನಕ್ಕೆ ಅಗತ್ಯವಾದ ಸಾಕ್ಷ್ಯಗಳನ್ನು ಒದಗಿಸಲಿ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತನಿಖೆಗಳು ನಡೆಯಲಿ’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಮಸ್ಯೆಗಳು ಎದುರಾದಾಗ ಜನರಿಗೆ ಮೊದಲು ನೆನಪಾಗುವುದು ಪೊಲೀಸರು. ನ್ಯಾಯವನ್ನು ಕೇಳಿಕೊಂಡು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಿರೀಕ್ಷಿತ ನ್ಯಾಯ ಸಿಗದೇ ಇದ್ದಾಗ ಪೊಲೀಸರು ಹಾಗೂ ನ್ಯಾಯಾಲಯವನ್ನು ದೂಷಣೆ ಮಾಡುತ್ತಾರೆ. ದೇವರನ್ನು ಬಿಡದ ಜನರು ಎಲ್ಲರನ್ನೂ ಟೀಕಿಸುತ್ತಾರೆ. ಇದಕ್ಕೆ ಆಸ್ಪದ ಆಗದ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು’ ಎಂದರು.
‘ಪೊಲೀಸ್ ಅಧಿಕಾರಿಗಳು ತಳಹಂತದ ಸಿಬ್ಬಂದಿಯನ್ನು ಅಲಕ್ಷಿಸಬಾರದು. ಅವರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಸಬೇಕು. ಪ್ರತಿಭಾವಂತ ಸಿಬ್ಬಂದಿಗೆ ಇದರಿಂದ ಅವಕಾಶ ಸಿಗುತ್ತದೆ. ವೃತ್ತಿಪರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕರ್ತವ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.
‘ಪೊಲೀಸ್ ಕರ್ತವ್ಯ ಕೂಟವು ಪೊಲೀಸರ ಕಾರ್ಯವೈಖರಿಗೆ ಸಹಕಾರಿಯಾಗಿದೆ. ಇದರಿಂದ ತಾಂತ್ರಿಕ ಸಾಕ್ಷ್ಯಾಧಾರ ಸಂಗ್ರಹಿಸುವ ಕೌಶಲ ಬೆಳೆಯುತ್ತದೆ. ತಾರ್ಕಿಕ ಅಂತ್ಯ ಕಾಣುವವರೆಗೂ ತನಿಖೆ ಕೈಗೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸಲಹೆ ನೀಡಿದರು.
ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸರು ಎರಡು ದಿನಗಳ ಈ ಕರ್ತವ್ಯ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. 6 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ದೊಡ್ಡಬಾತಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕಿ ಛಾಯಾ ಕುಮಾರಿ, ಡಿವೈಎಸ್‌ಪಿ ಎ.ಕೆ. ರುದ್ರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.