ದಾವಣಗೆರೆ: ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷಣೆಯಡಿ ನಗರದಲ್ಲಿ ಭಾನುವಾರ ‘ಪೊಲೀಸರೊಂದಿಗೆ ಮ್ಯಾರಥಾನ್’ ನಡೆಯಿತು. 10,000 ಮೀಟರ್ ಹಾಗೂ 5,000 ಮೀಟರ್ ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರು ಪೊಲೀಸರೊಂದಿಗೆ ಹೆಜ್ಜೆ ಹಾಕಿದರು.
ಮಾದಕ ವಸ್ತುಗಳ ದುಷ್ಪರಿಣಾಮ, ಸಂಚಾರ ನಿಯಮಗಳ ಜಾಗೃತಿ, ಮಹಿಳೆಯರ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಮ್ಯಾರಥಾನ್ ಮೂಲಕ ಅರಿವು ಮೂಡಿಸಲಾಯಿತು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತೂ ಜಾಗೃತಿ ಮೂಡಿಸಲಾಯಿತು.
‘ಜೀವನ ಶೈಲಿ ಬದಲಾಗಿದ್ದು, ರಾಗಿ ಮುದ್ದೆ, ರೊಟ್ಟಿ ತಿನ್ನುತ್ತಿದ್ದ ಜನರು ಪಿಜ್ಜಾ, ಬರ್ಗರ್ ಮೊರೆ ಹೋಗಿದ್ದಾರೆ. ಇದರಿಂದ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಹೆಚ್ಚು ಓಡಾಡುವಂತಾಗಿದೆ. ದೈಹಿಕ ಆರೋಗ್ಯಕ್ಕೆ ನಿಯಮಿತ ಓಟ, ವ್ಯಾಯಾಮ ಅಗತ್ಯ’ ಎಂದು ಮ್ಯಾರಥಾನ್‌ಗೆ ಚಾಲನೆ ನೀಡಿದ ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಹೇಳಿದರು.
‘ಸಿಂಹ ಗರ್ಜನೆ ಮಾಡಿದರೆ, ಬೆಕ್ಕು ಕಾಣಿಸಿಕೊಂಡರೂ ಪೊಲೀಸರು ಬೇಕು. ಸಮಾಜದಲ್ಲಿ ಪೊಲೀಸರ ಬಗ್ಗೆ ಭಯ ಇದೆ. ಆದರೆ, ನಂಬಿಕೆ ಇಲ್ಲ. ಪೊಲೀಸರೊಂದಿಗೆ ಜನರು ಕೈಜೋಡಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪೊಲೀಸರು ಮತ್ತು ಜನರಲ್ಲಿ ನಂಬಿಕೆ, ಉತ್ತಮ ಬಾಂಧವ್ಯ ಬೆಸೆಯುವ ಅಗತ್ಯವಿದೆ’ ಎಂದು ಹೇಳಿದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ 10,000 ಮೀಟರ್ ಮ್ಯಾರಥಾನ್ ಡೆಂಟಲ್ ಕಾಲೇಜು ರಸ್ತೆ, ಗುಂಡಿ ವೃತ್ತ, ಶಾಮನೂರು ರಸ್ತೆ, ಜಯದೇವ ವೃತ್ತದ ಮೂಲಕ ಕ್ರೀಡಾಂಗಣ ತಲುಪಿತು. 5,000 ಮೀ. ಮ್ಯಾರಥಾನ್ ಹದಡಿ ರಸ್ತೆ, ಎಆರ್‌ಜಿ ಕಾಲೇಜು, ನೂತನ ಕಾಲೇಜು ರಸ್ತೆ ಮೂಲಕ ಕ್ರೀಡಾಂಗಣಕ್ಕೆ ಮರಳಿತು. ಮ್ಯಾರಥಾನ್ ಸಾಗುವ ಮಾರ್ಗಗಳಲ್ಲಿ ಪೊಲೀಸರು, ಮಾರ್ಗದರ್ಶನ ಮಾಡುವರು ಇದ್ದರು. ಕುಡಿಯುವ ನೀರು ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ್ ಜಿ., ಡಿವೈಎಸ್‌ಪಿ ಶರಣ ಬಸವೇಶ್ವರ ಭೀಮರಾವ್, ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.