ದಾವಣಗೆರೆ: ಒಂದು ಜಾಗದ ಸೇವೆಯಲ್ಲಿ ನಿಗದಿತ ಕಾಲಾವಧಿ ಮುಗಿದರೂ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆ ತೊರೆಯಲು ಹಿಂದೇಟು ಹಾಕುತ್ತಿದ್ದಾರೆ. ಸಮವಸ್ತ್ರ ಧರಿಸದ ಈ ಹುದ್ದೆಗಳಲ್ಲಿ ಮುಂದುವರಿಯಲು ಲಾಬಿ, ಪ್ರಭಾವ ಬೀರುವಲ್ಲಿ ನಿರತರಾಗಿದ್ದಾರೆ. ಠಾಣೆಗೆ ಮರಳಲು ಇಚ್ಛಿಸದ ಕೆಲವರು ಬಡ್ತಿ ಕೂಡ ನಿರಾಕರಿಸುತ್ತಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳಿಗೆ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳೆಂದರೆ ಅಪಥ್ಯ. ‘ಎಕ್ಸಿಕ್ಯೂಟಿವ್’ (ಆಡಳಿತಾತ್ಮಕ) ಹುದ್ದೆಗಳಿಗೆ ಲಾಬಿ, ಪ್ರಭಾವ ಬೀರುತ್ತಾರೆ. ಆದರೆ, ಸಬ್ ಇನ್‌ಸ್ಪೆಕ್ಟರ್‌ಗಿಂತ ಕೆಳಹಂತದ ಹುದ್ದೆಯಲ್ಲಿರುವ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐಗಳಿಗೆ ಸಮವಸ್ತ್ರ ಧರಿಸುವ ‘ಎಕ್ಸಿಕ್ಯೂಟಿವ್’ ಹುದ್ದೆಗಳ ಬಗ್ಗೆ ತಾತ್ಸಾರವಿದೆ.
ಪೊಲೀಸ್ ಇಲಾಖೆಯಲ್ಲಿ ಲೋಕಾಯುಕ್ತ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ), ಗುಪ್ತಚರ, ಸಿಐಡಿ, ಆಂತರಿಕ ಭದ್ರತಾ ಪಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಐ.ಜಿ ಕಚೇರಿ ಸೇರಿದಂತೆ ಹಲವು ‘ನಾನ್ ಎಕ್ಸಿಕ್ಯೂಟಿವ್‘ ಘಟಕಗಳಿವೆ. ಠಾಣೆ, ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಈ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. 3ರಿಂದ 5 ವರ್ಷಗಳವರೆಗೆ ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. ಈ ಕಾಲಾವಧಿ ಮುಗಿದರೂ ಹುದ್ದೆ ತೊರೆಯಲು ಪೊಲೀಸರು ಮುಂದಾಗುತ್ತಿಲ್ಲ.
ಮಹಾಲೇಖಪಾಲರ ಆಕ್ಷೇಪ: ನಿಯೋಜಿತ ಅವಧಿ ಪೂರ್ಣಗೊಂಡರೂ ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ಮುಂದುವರಿಯುತ್ತಿರುವುದು 2023ರ ಮಹಾಲೇಖಪಾಲರ ವರದಿಯಲ್ಲಿ ಪತ್ತೆಯಾಗಿತ್ತು. 2018ರಿಂದ 2022ರವರೆಗೆ ಜಿಲ್ಲೆಯಲ್ಲಿ ಇಂತಹ ಲೋಪ ಉಂಟಾಗಿರುವುದು ವರದಿಯಲ್ಲಿ ಉಲ್ಲೇಖವಾಗಿತ್ತು. ನಿಗದಿತ ಕಾಲಾವಧಿ ಪೂರೈಸಿದ ಪೊಲೀಸರನ್ನು ಮರಳಿ ಮಾತೃ ಘಟಕಕ್ಕೆ ಕರೆಸಿಕೊಳ್ಳಲು ಸೂಚಿಸಿತ್ತು. ಮಹಾಲೇಖಪಾಲರ ಆಕ್ಷೇಪದಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಕಾಲಾವಧಿ ಮೀರಿದ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಿ ಹಿಂದಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ, ಇದಕ್ಕೆ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಿಲ್ಲಾ ಘಟಕದಲ್ಲಿ ನಿಯೋಜಿತ ಅವಧಿ ಪೂರ್ಣಗೊಳಿಸಿದ ಐವರು ಪೊಲೀಸರನ್ನು ಮಾತೃ ಘಟಕಕ್ಕೆ ಕಳುಹಿಸುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಎಡಿಜಿಪಿ ಕಚೇರಿಗೆ ಏ.8ರಂದು ಪತ್ರ ಬರೆದಿದ್ದಾರೆ. 2016–20ರವರೆಗೆ ನಿಯೋಜಿತರಾದ ಈ ಪೊಲೀಸರ ಅವಧಿ ಪೂರ್ಣಗೊಂಡು ಹಲವು ವರ್ಷಗಳೇ ಉರುಳಿವೆ. 2016ರಲ್ಲಿ ನಿಯೋಜಿತರಾದ ಸಿಬ್ಬಂದಿಯೊಬ್ಬರ ಅವಧಿ 2019ಕ್ಕೆ ಮುಕ್ತಾಯವಾಗಿದೆ. ಆದರೆ, ಅವರು ಇನ್ನೂ ಇದೇ ಹುದ್ದೆಯಲ್ಲಿಯೇ ಮುಂದುವರಿಯುತ್ತಿದ್ದಾರೆ.
‘ಡಿಸಿಆರ್‌ಇಗೆ ನಿಯುಕ್ತಿಗೊಂಡಿದ್ದ ಕಾನ್‌ಸ್ಟೆಬಲ್ ಒಬ್ಬರು 3 ಬಾರಿ ಬಡ್ತಿ ನಿರಾಕರಿಸಿದ್ದಾರೆ. ಆಂತರಿಕ ಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಕೂಡ ಬಡ್ತಿ ಬೇಡವೆಂದು ಬರೆದುಕೊಟ್ಟಿದ್ದರು. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಲೋಕಾಯುಕ್ತದಲ್ಲಿ ವಿಲೀನಗೊಂಡ ಬಳಿಕವೂ ಕೆಲವರು ಮಾತೃ ಘಟಕಗಳಿಗೆ ಮರಳಿಲ್ಲ. ಹುದ್ದೆಗಳು ಖಾಲಿಯಾಗದೇ ಹೊಸಬರನ್ನು ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಘಟಕಗಳಲ್ಲಿ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದೇವೆ’ ಎಂಬುದು ಕಾನ್‌ಸ್ಟೆಬಲ್ ಒಬ್ಬರ ಅಳಲು.
ಮೂರು ವರ್ಷಗಳ ಅವಧಿಗೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಕಾಲಾವಧಿ ಪೂರ್ಣಗೊಂಡ ಬಳಿಕ ಹೊಸಬರನ್ನು ನಿಯೋಜಿಸುವ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದು ಪ್ರತಿ ವರ್ಷದ ಪ್ರಕ್ರಿಯೆ.– ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವರ್ಗಾವಣೆಯಾದರೂ ಒಒಡಿ ಸೇವೆ
ಒಂದೇ ಸ್ಥಳದಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿದ ಪೊಲೀಸ್ ಕಾನ್‌ಸ್ಟೆಬಲ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐಗಳನ್ನು ವರ್ಗಾವಣೆ ಮಾಡುವಂತೆ ಪೊಲೀಸ್ ಮಹಾನಿರ್ದೇಶಕರು (ಡಿಜಿ) 2024ರ ಜುಲೈ 15ರಂದು ಆದೇಶ ಹೊರಡಿಸಿದ್ದರು. ಆಗ ವರ್ಗಾವಣೆಯಾದ ಕೆಲವರು ‘ಅನ್ಯಕಾರ್ಯ ನಿಮಿತ್ತ’ (ಒಒಡಿ) ಆಧಾರದ ಮೇರೆಗೆ ಮತ್ತೆ ಅದೇ ಹುದ್ದೆಗಳಿಗೆ ಬಂದಿದ್ದಾರೆ.
ಪೊಲೀಸರು ತಮ್ಮ ಸೇವಾವಧಿಯಲ್ಲಿ 2 ಬಾರಿ ಮಾತ್ರವೇ ನಿಯೋಜಿತ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ಹಲವು ಸಿಬ್ಬಂದಿ ‘ನಾನ್ ಎಕ್ಸಿಕ್ಯೂಟಿವ್’ ಘಟಕಗಳಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿದ್ದಾರೆ. ಒಂದೊಮ್ಮೆ ವರ್ಗಾವಣೆಯಾದರೂ ಪ್ರಭಾವ ಬಳಸಿ ಮತ್ತೆ ಅದೇ ಸ್ಥಳಕ್ಕೆ ಒಒಡಿ ಮೇಲೆ ನಿಯುಕ್ತಿಗೊಳ್ಳುತ್ತಿದ್ದಾರೆ. ಈ ಪರಿಪಾಠ ಅಧಿಕಾರಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
ಹುದ್ದೆಗೆ ಪೈಪೋಟಿ ಜೋರು
ಕಾನೂನು ಸುವ್ಯವಸ್ಥೆ ಸಂಚಾರ ಮಹಿಳಾ ‘ಸೆನ್’ (ಆರ್ಥಿಕ ಸೈಬರ್ ಹಾಗೂ ಮಾದಕ ವಸ್ತು ನಿಯಂತ್ರಣ) ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸೇರಿ ಜಿಲ್ಲೆಯಲ್ಲಿ 25 ಪೊಲೀಸ್ ಠಾಣೆಗಳಿವೆ. ಅಂದಾಜು 1800ಕ್ಕೂ ಹೆಚ್ಚು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಲೋಕಾಯುಕ್ತ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಗುಪ್ತಚರ ಸೇರಿದಂತೆ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು 80 ಇರಬಹುದು. ಇಲ್ಲಿಗೆ ಸಿಬ್ಬಂದಿ ನಿಯುಕ್ತಿಗೊಳಿಸುವ ಹಾಗೂ ಮಾತೃ ಘಟಕಕ್ಕೆ ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತದೆ. ಈ ಹುದ್ದೆಗಳಿಗೆ ಪೈಪೋಟಿಯೂ ಜೋರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.