ADVERTISEMENT

ಹಲ್ಲೆ ಮಾಡಿದವರನ್ನು ಬಂಧಿಸದಿದ್ದರೆ ಪೋಲಿಸ್ ಠಾಣೆ ಮುತ್ತಿಗೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 13:34 IST
Last Updated 8 ಜೂನ್ 2020, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಇಲ್ಲಿನ ಶೇಖರಪ್ಪ ನಗರದಲ್ಲಿ ಫುಡ್‌ಕಿಟ್ ಕೂಪನ್ ವಿತರಣೆ ಬಂಜಾರ ಸಮುದಾಯದ ಯುವಕ ಶ್ರೀಕಾಂತ್ ಅವರಿಗೆ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್ ಒತ್ತಾಯಿಸಿದರು.

‘ಲಾಕ್‍ಡೌನ್ ವೇಳೆ ಸ್ಥಳೀಯರಾದ ದಾದಾಪೀರ್,ಅಲ್ಲಾಭಕ್ಷಿ, ಆಸೀಫ್, ಮಹಮ್ಮದ್ ಇಸಾಕ್ ಅವರು ಕೆಲವು ಮನೆಗಳಿಗೆ ಮಾತ್ರ ಫುಡ್‌ಕಿಟ್‍ನ ಕೂಪನ್‌ಗಳನ್ನು ಹಂಚುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ಶ್ರೀಕಾಂತ್ ಮೇಲೆ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಶ್ರೀಕಾಂತ್ ಅವರ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಈ ಬಗ್ಗೆ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ನೀಡಿದರೂ ಅವರನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಶ್ರೀಕಾಂತ್ ಏಪ್ರಿಲ್‌ ತಿಂಗಳಲ್ಲಿ ಮರದ ಮೇಲಿಂದ ಬಿದ್ದು ಎಡಗಾಲು ಗಾಯಗೊಂಡು ಮಣಿಪಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅವರ ಕಾಲಿಗೆ ರಾಡ್ ಹಾಕಲಾಗಿದೆ. ಇದೀಗ ಬಲಗಾಲಿಗೂ ಪೆಟ್ಟು ಬಿದ್ದು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಶೇಖರಪ್ಪ ನಗರದಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿದ್ದು, ಶ್ರೀಕಾಂತ್ ಇರುವ ಮನೆಯನ್ನು ಬಿಡುವಂತೆ ಪದೇಪದೇ ತೊಂದರೆ ನೀಡಲಾಗುತ್ತಿದೆ. ಕೂಪನ್ ನೆಪದಲ್ಲಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲಾಗಿದೆ. ಶ್ರೀಕಾಂತ್ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಈ ಕೂಡಲೇ ಹಲ್ಲೆ ನಡೆಸಿವರನ್ನು ಬಂಧಿಸಬೇಕು ಇಲ್ಲವಾದರೆ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಬಂಜಾರ ಸಮುದಾಯದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಮನವಿ ನೀಡಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ, ಪಾಲಿಕೆ ಸದಸ್ಯರಾದ ಜಯಮ್ಮ,ಮಂಜುನಾಥ್ ನಾಯ್ಕ್, ಜಯನಾಯ್ಕ್, ನಿಂಗರಾಜ್, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.