ADVERTISEMENT

ಬಾಲಕಿಯ ಮದುವೆಗೆ ರಾಜಕೀಯ ಒತ್ತಡ?

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:08 IST
Last Updated 21 ಮೇ 2022, 4:08 IST

ದಾವಣಗೆರೆ: ಹರಿಹರದ ಪ್ರಶಾಂತ್ ನಗರದಲ್ಲಿ ಬಾಲಕಿಯೊಬ್ಬಳ ಮದುವೆ ನಡೆದಿದ್ದು, ಹರಿಹರದ ಹಿರಿಯ ರಾಜಕೀಯ ನಾಯಕರೊಬ್ಬರು ಮದುವೆ ತಡೆಯದಂತೆ ಒತ್ತಡ ತಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಶಾಂತ್ ನಗರದ ವರನ ಸ್ವಗೃಹದಲ್ಲಿ ಶುಕ್ರವಾರ ವಿವಾಹ ನಿಶ್ಚಯವಾಗಿತ್ತು. ಶುಕ್ರವಾರ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಕೊಲ್ಯಾಬ್ ಡಾನ್ ಬಾಸ್ಕೋದ ಕಾರ್ಯಕರ್ತ ಸ್ವಾಮಿ.ಬಿ, ಹಾಗೂ ಇತರರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ಜನ್ಮದಿನಾಂಕ ಪರಿಶೀಲಿಸಿದಾಗ 16 ವರ್ಷ 2 ತಿಂಗಳು ಎಂದು ತಿಳಿದು ಬಂದಿದೆ.

ADVERTISEMENT

ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ಕಾರ್ಯಕರ್ತ ಸ್ವಾಮಿ ಬಿ. ನಾಗರಾಜ.ಟಿ., ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ, ಮೇಲ್ವಿಚಾರಕಿ ಲಕ್ಷ್ಮಿ, ಸುವರ್ಣ, ರಾಜಗಿರಿ, ಹರಿಹರ ನಗರದ ಪೊಲೀಸ್ ಠಾಣೆಯ ಎಸ್‌ಐ ಮಲ್ಲಿಕಾರ್ಜುನಪ್ಪ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲಕಿಯ ಮದುವೆಯೂ ನಡೆದಿರುವುದು ಕಂಡುಬಂದಿದೆ.

ಮದುವೆಯ ಬಳಿಕ ತಾಳಿಯನ್ನು ತೆಗೆದಿಟ್ಟು ಮದುವೆಯಾಗಿರುವ ವಿಷಯವನ್ನು ಮರೆಮಾಚಿದ್ದಾರೆ.

ಪೋಷಕರನ್ನು ವಿಚಾರಣೆ ಮಾಡಿದಾಗ ‘ವಿವಾಹವನ್ನೇ ಮಾಡಿಲ್ಲ. ಎಂದು ದೇವರ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ ಬಳಿಕ ಬಾಲ್ಯ ವಿವಾಹದ ಬಗ್ಗೆ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಿ, ಬಾಲಕಿಗೆ ಪೋಷಣೆ ಮತ್ತು ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಬಾಲಕಿಯನ್ನು ವಶಕ್ಕೆ ಪಡೆದು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ.

ಮರಳು ವಶ
ದಾವಣಗೆರೆ:
ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದ ಸ್ಮಶಾನದ ಪಕ್ಕದಲ್ಲಿರುವ ಹಳ್ಳದಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಚನ್ನಗಿರಿ ಎಸ್‌ಐ ಮಧು ಪಿ.ಬಿ ಅವರ ತಂಡ ದಾಳಿ ನಡೆಸಿ 5 ಟ್ರ್ಯಾಕ್ಟರ್ ಮರಳನ್ನು ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.