ADVERTISEMENT

ಕಲುಷಿತ ನೀರು, ಆಹಾರದಿಂದ ರೋಗ ಹೆಚ್ಚಳ: ಟಿ.ವಿ. ರಾಮಚಂದ್ರ ಕಳವಳ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:03 IST
Last Updated 7 ನವೆಂಬರ್ 2025, 6:03 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ದಾವಣಗೆರೆ: ನೀರು ಹಾಗೂ ಆಹಾರ ಕಲುಷಿತಗೊಂಡು ಕ್ಯಾನ್ಸರ್‌ ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೇಶದ ಯುವಶಕ್ತಿಯನ್ನು ಮಾಲಿನ್ಯ ನುಂಗಿಹಾಕುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಟಿ.ವಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ‘ಬಹುಶಿಸ್ತೀಯ ಸಂಶೋಧನೆ ಮತ್ತು ನಾವೀನ್ಯತೆ ಮೂಲಕ ಆಧುನಿಕ ಸುಸ್ಥಿರತೆ’ ಕುರಿತು ಮೂರು ದಿನ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳು ಆಹಾರ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸಿವೆ. ಮಾಲಿನ್ಯ ಹೆಚ್ಚಾಗಿರುವ ನೀರಿನಲ್ಲಿ ಬೆಳೆದ ತರಕಾರಿ, ಮೀನು ಸೇವಿಸುವುದರಿಂದ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್‌ಕೆಜಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೂಡ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ಹಾಗೂ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಬೆಂಗಳೂರಿನಲ್ಲಿ ಏರಿಕೆಯಾಗುತ್ತಿದೆ’ ಎಂದು ಆತಂಕ ಹೊರಹಾಕಿದರು.

‘ಪ್ಲಾಸ್ಟಿಕ್ ಬಾಟಲಿಯಲ್ಲಿ ಪೂರೈಕೆಯಾಗುವ ನೀರು ಕ್ಯಾನ್ಸರ್‌ ಕಾಯಿಲೆಯನ್ನು ಹರಡುತ್ತಿದೆ. ಪ್ಲಾಸ್ಟಿಕ್‌ ಬಾಟಲಿಯ ಮೂಲಕ ಕ್ಯಾನ್ಸರ್‌ ಮನೆ–ಮನೆಗೆ ತಲುಪಿದೆ. ಪ್ಲಾಸ್ಟಿಕ್‌ ಚೀಲಗಳಲ್ಲಿನ ಆಹಾರ ಸೇವನೆಯಿಂದಲೂ ಕ್ಯಾನ್ಸರ್‌ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆಯನ್ನು ಪ್ರತಿಯೊಬ್ಬರು ಕೈಬಿಡಬೇಕು. ಆಗ ಆರೋಗ್ಯವೂ ಸುಧಾರಿಸುತ್ತದೆ. ಸುಸ್ಥಿರ ಬದುಕಿಗೆ ಆರೋಗ್ಯವೂ ಮುಖ್ಯ’ ಎಂದು ಹೇಳಿದರು.

‘ಯುವ ಸಮೂಹವೇ ದೇಶದ ಶಕ್ತಿ. ಯುವ ಸಮೂಹದಲ್ಲಿ ಸಂವೇದನಾಶೀಲತೆ ಬೆಳೆದರೆ ದೇಶ ಸಬಲವಾಗುತ್ತದೆ. ಇದಕ್ಕೆ ತಂತ್ರಜ್ಞಾನ, ಪರಿಸರ ಸಾಕ್ಷರತೆ ಕೂಡ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

ಇಂಗ್ಲೆಂಡ್‌ನ ಡಿ ಮಾಂಟ್‌ಫೋರ್ಟ್ ವಿಶ್ವವಿದ್ಯಾಲಯದ ರಘು ರಾಘವನ್, ‘ಭಾರತ ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರ. ಇದೇ ಕಾರಣಕ್ಕೆ ಭಾರತ ತನ್ನ ಅಂತಸತ್ವವನ್ನು ಕಳೆದುಕೊಂಡಿಲ್ಲ. ಈ ಸಾಂಸ್ಕೃತಿಕ ಪರಂಪರೆ, ಶ್ರೀಮಂತಿಕೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಸುಸ್ಥಿರತೆಗೆ ತಂತ್ರಜ್ಞಾನ, ಸಂಸ್ಕೃತಿ, ಮಾನಸಿಕ ಆರೋಗ್ಯವೂ ಮುಖ್ಯ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಉಪಕುಲಪತಿ ಎಚ್‌.ಡಿ.ಮಹೇಶಪ್ಪ, ಕುಲಸಚಿವ ಸುನೀಲ್‌ ಕುಮಾರ್‌, ಸಂಶೋಧನಾ ಸಲಹೆಗಾರ ಸಿ.ಎಸ್‌.ರಮೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.