ADVERTISEMENT

ಸನಾವುಲ್ಲಾನನ್ನು ಬಂಧಿಸದಿದ್ದರೆ ಹೋರಾಟ: ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 12:07 IST
Last Updated 3 ಸೆಪ್ಟೆಂಬರ್ 2020, 12:07 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ದಾವಣಗೆರೆ: ಪವರ್‌ ಆಫ್‌ ಪಾಕಿಸ್ತಾನ ಫೇಸ್‌ಬುಕ್‌ ಪೇಜ್‌ ಅನ್ನು ಹಂಚಿರುವ ಪೊಲೀಸ್‌ ಸಿಬ್ಬಂದಿ ಸನಾವುಲ್ಲಾನನ್ನು 24 ಗಂಟೆಗಳ ಒಳಗೆ ಬಂಧಿಸದಿದ್ದರೆ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.

‘ದೇಶದ ಬಗ್ಗೆ ಜಿಲ್ಲಾಧಿಕಾರಿ, ಎಸ್‌ಪಿಗೆ ಕಾಳಜಿ ಇರದೇ ಇರಬಹುದು. ನಮಗಿದೆ. ಪಾಕಿಸ್ತಾನದ ಪರ ಮಾತನಾಡುವ ಸನಾವುಲ್ಲಾ ದೇಶದ್ರೋಹಿ. ಆತನ ವಿರುದ್ಧ ದೂರು ನೀಡಲಾಗಿದೆ. ಆದರೆ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವ, ಗೃಹಸಚಿವ ಯಾರೂ ಅವನ ಬಗ್ಗೆ ಮಾತನಾಡುತ್ತಿಲ್ಲ. ಡಿಸಿ, ಎಸ್‌ಪಿ ಆಡಳಿತ ನಡೆಸುತ್ತಿಲ್ಲ. ಸನಾವುಲ್ಲನ ಆಡಳಿತ ನಡೆಯುತ್ತಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸನಾವುಲ್ಲಾ ಎಲ್ಲ ಕಡೆ ಓಡಾಡುತ್ತಿದ್ದಾನೆ. ಪೊಲೀಸರಿಗೆ ಬಂಧಿಸಲು ಆಗುವುದಿಲ್ಲ ಎಂದಾದರೆ ಹೇಳಲಿ. ನಾವೇ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

ಸಂಗೊಳ್ಳಿ ರಾಯಣ್ಣ ಸಹಿತ ಎಲ್ಲ ಹೋರಾಟಗಾರರು ಒಂದು ಜಾತಿ, ಪ್ರದೇಶ, ಭಾಷೆಗಾಗಿ ಹೋರಾಟ ಮಾಡಿದವರಲ್ಲ. ಅವರು ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರು. ಅಂಥವರನ್ನು ಜಾತಿ, ಗಡಿ, ಭಾಷೆಗಳಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಶಿವಾಜಿ ಮಹಾರಾಷ್ಟ್ರದವರಾದರೂ ಪ್ರತಿ ಜಿಲ್ಲೆಯಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡಿದ್ದೇವೆ. ಅಂಥದ್ದೇ ಮಹಾನ್‌ ನಾಯಕ ಸಂಗೊಳ್ಳಿ ರಾಯಣ್ಣ. ಅವರ ಪ್ರತಿಮೆಗೆ ವಿರೋಧ ಸರಿಯಲ್ಲ. ಎಂಇಎಸ್‌ ಜತೆ ಬಿಜೆಪಿ, ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿರುವುದೇ ಇಂಥ ಪುಂಡಾಟಿಕೆಗೆ ಕಾರಣ ಎಂದು ಆರೋಪಿಸಿದರು.

ಇದೀಗ ಪೀರನವಾಡಿಯಲ್ಲಿ ಸ್ಥಳೀಯರೇ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಿದ್ದಾರೆ. ವೃತ್ತಕ್ಕೆ ಶಿವಾಜಿಯ ಹೆಸರು ಇಟ್ಟಿದ್ದಾರೆ. ಸೌಹಾರ್ದವಾಗಿ ಪ್ರಕರಣ ಇತ್ಯರ್ಥವಾಘಿದೆ. ಯಾರೂ ಮತ್ತೆ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಮುಖಂಡರಾದ ವಿನೋದ್‌ರಾಜ್‌, ಶ್ರೀಧರ್, ರಮೇಶ, ಮಾರ್ಕಂಡೆಯ, ಸಾಗರ್, ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.