
ಹರಿಹರ: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ–25ನ್ನು ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ರಾಜನಹಳ್ಳಿ ಮತ್ತು ಬೆಳ್ಳೂಡಿ ಗ್ರಾಮದಲ್ಲಿ ತಲಾ ₹5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರೆವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿಲ್ಲ. ವಾಹನ ಸಂಚಾರಕ್ಕೆ ತೊಂದರೆ ಆಗಿರುವುದರಿಂದ ಅನಿವಾರ್ಯವಾಗಿ ರಾಜ್ಯ ಸರ್ಕಾರವೇ ಪಿಪಿಪಿ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಲು ನಿರ್ಧರಿಸಿದೆ ಎಂದರು.
ಈಗಾಗಲೇ ವಾಹನ ಸಂಚಾರ ಬಂದ್ ಮಾಡಲಾಗಿರುವ, ನಗರದ ರಾಘವೇಂದ್ರ ಮಠದ ಸಮೀಪದಲ್ಲಿ 1886ರಲ್ಲಿ ನಿರ್ಮಿಸಿದ್ದ ತುಂಗಭದ್ರಾ ಹಳೆ ಸೇತುವೆಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಅವರು ಪ್ರಶ್ನೆಗೆ ಉತ್ತರಿಸಿದರು.
ನೀರಿನ ರಭಸಕ್ಕೆ ಸೇತುವೆಯ ಭದ್ರತಾ ಗೋಡೆಗೆ ಹಾನಿಯಾಗುತ್ತಿದೆ. ಇರುವ ಸೇತುವೆಯನ್ನೇ ಅಭಿವೃದ್ಧಿ ಪಡಿಸಬಹುದೇ ಅಥವಾ ಹೊಸ ಸೇತುವೆಯನ್ನು ನಿರ್ಮಿಸಬೇಕೇ ಎಂಬುದರನ್ನು ಪರಿಶೀಲಿಸಬೇಕಿದೆ ಎಂದು ಹೇಳಿದರು.
ಬೆಳ್ಳೂಡಿ ಸಮೀಪದ ಹಳ್ಳದ ಸೇತುವೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಚಿದರು. ಬೆಳ್ಳೂಡಿ-ರಾಮತೀರ್ಥ ನಡುವಿನ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಡಾಂಬರ್ ಅಥವಾ ಸಿಮೆಂಟ್ ಬಿಟ್ಟು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆಗಳನ್ನು ನಿರ್ಮಿಸುವ ತಂತ್ರಜ್ಞಾನ ವಿದೇಶಗಳಲ್ಲಿದೆ. ಇಲ್ಲಿಯೂ ಅದನ್ನು ಜಾರಿ ಮಾಡುವುದು ಉತ್ತಮ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ, ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ, ಶಾಸಕರಾದ ಬಿ.ಪಿ.ಹರೀಶ್, ದೇವೇಂದ್ರಪ್ಪ, ಬಸವಂತಪ್ಪ, ಟಿ.ರಘುಮೂರ್ತಿ, ಮಾಜಿ ಶಾಸಕ ಎಸ್.ರಾಮಪ್ಪ, ಬೆಳ್ಳೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಗೌಡ್ರು, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ.ಬಿ.ಆಬಿದ್ ಅಲಿ, ಮಂಜುನಾಥ್ ಪಟೇಲ್, ಎಲ್.ಬಿ.ಹನುಮಂತಪ್ಪ, ಹಬೀಬ್ ಬೇಗ್, ಡಿ.ಕುಮಾರ್, ಎಚ್.ಕೆ.ಕನ್ನಪ್ಪ, ಹಾಲೇಶ್ ಗೌಡ್ರು ಹಾಗೂ ಇತರರು ಇದ್ದರು.
ರಸ್ತೆಗಳ ನಿರ್ಮಾಣಕ್ಕೆ 30 ತಿಂಗಳಲ್ಲಿ ಹರಿಹರ ತಾಲ್ಲೂಕಿಗೆ ₹36 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ₹20 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದುಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.