ADVERTISEMENT

ಕೊಟ್ಟ ಮಾತಿಗೆ ತಪ್ಪಿ ನಡೆದ ಬಿಎಸ್‌ವೈ: ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಟೀಕೆ

ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 15:42 IST
Last Updated 18 ಅಕ್ಟೋಬರ್ 2020, 15:42 IST
ಪ್ರಸನ್ನಾನಂದ ಸ್ವಾಮೀಜಿ
ಪ್ರಸನ್ನಾನಂದ ಸ್ವಾಮೀಜಿ   

ದಾವಣಗೆರೆ: ‘ಅಧಿಕಾರಕ್ಕೆ ಬಂದರೆ 24 ಗಂಟೆಗಳ ಒಳಗೆ ಮೀಸಲಾತಿ ನೀಡುತ್ತೇವೆ ಎಂದಿದ್ದ, ನ್ಯಾ.ನಾಗಮೋಹನದಾಸ್‌ ವರದಿ ಸಲ್ಲಿಕೆಯಾದ ಕೂಡಲೇ ಅಧಿವೇಶನದಲ್ಲಿ ಅನುಮೋದನೆ ಪಡೆದು ಜಾರಿ ಮಾಡುವುದಾಗಿ ಭರವಸೆಗಳನ್ನು ನೀಡಿದ್ದ ಬಿ.ಎಸ್‌. ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ವೀರಾವೇಶದಿಂದ ಮಾತನಾಡಿದ್ದ ಅವರು ಈಗ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಟೀಕಿಸಿದರು.

ನಗರದ ನಾಯಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಶೇ 7.5 ರ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶೋಷಣೆಗೊಳಗಾದ ಪರಿಶಿಷ್ಠ ಪಂಗಡಕ್ಕೆ 1958ರಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಶೇ 3 ಮೀಸಲಾತಿ ನೀಡಲಾಗಿದೆ. 2011ರ ಜನಸಂಖ್ಯೆಗನುಗುಣವಾಗಿ ಶೇ 7.5ಕ್ಕೆ ಏರಿಸಬೇಕು. ಲಿಂಗಸೂರಿನ ಸಮಾರಂಭದಲ್ಲಿ ವೀರಾವೇಶದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅಧಿಕಾರ ಸಿಕ್ಕಮೇಲೆ ಠುಸ್ಸ್ ಆಗಿದ್ದಾರೆ ಎಂದರು.

ADVERTISEMENT

ಮೀಸಲಾತಿಗಾಗಿ ರಾಜನಹಳ್ಳಿಯಿಂದ ರಾಜಧಾನಿವರೆಗೂ ನಾಯಕ ಸಮುದಾಯ ಪಾದಯಾತ್ರೆ ಮಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನೇ ಬೀಳಿಸಿದ್ದೇವೆ. ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಇವರಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಅಧಿವೇಶನದಲ್ಲಿ ಮೀಸಲಾತಿಗೆ ಅನುಮೋದನೆ ಪಡೆಯದಿದ್ದಲ್ಲಿ ನಾಯಕ ಸಮಾಜದ ಶಾಸಕರು, ಸಂಸದರು, ಧರಣಿಗೆ ಕೂರುತ್ತಾರೆ. ಎಲ್ಲಾ ಶಾಸಕರೂ, ಸಂಸದರೂ ರಾಜೀನಾಮೆಗೆ ಸಿದ್ಧರಿದ್ದಾರೆ. ಕೊರೊನಾ ನೆಪ ಹೇಳಿ ತಪ್ಪಿಸಿಕೊಳ್ಳಲು ನಾನು ಬಿಡುವುದಿಲ್ಲ. ಕೊರೊನಾದ ಅಪ್ಪ, ಅವ್ವ ಬಂದರೂ ಮೀಸಲಾತಿ ಕೊಡುವವರೆಗೂ ನಮ್ಮ ಹೋರಾಟ ನಿಲ್ಲದು’ ಎಂದರು.

‘ಮೀಸಲಾತಿಗಾಗಿಸ್ವಾಮೀಜಿ ಉಪವಾಸ ಕೂರಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಅವರು ಉಪವಾಸ ಮಾಡುವುದು ಸರಿಯಲ್ಲ. ಸುಳ್ಳು ಆಶ್ವಾಸನೆ ನೀಡುತ್ತಿರುವ ಸಮುದಾಯದ ಶಾಸಕರು, ಮಂತ್ರಿಗಳು, ಸಂಸದರು, ಜಿಲ್ಲಾ ಪಂಚಾಯಿತಿ ಸದಸ್ಯರು, ಉಪವಾಸ ಸತ್ಯಾಗ್ರಹ ಮಾಡಬೇಕು’ ಎಂದು ಎಚ್.ಕೆ. ರಾಮಚಂದ್ರಪ್ಪ ಸಲಹೆ ನೀಡಿದರು.

ಚನ್ನಗಿರಿ ತಾಲ್ಲೂಕು ಮುಖಂಡ ಲೋಹಿತ್, ‘ನಾಯಕ ಸಮುದಾಯದ ರಾಜಕಾರಣಿಗಳು ಕಾರ್ಯಕ್ರಮಕ್ಕೆ, ಸಮಾರಂಭಗಳಲ್ಲಿ ಫೋಟೊಗಳಿಗೆ ಸೀಮಿತರಾಗಿದ್ದಾರೆ. ಸಿಎಂ ಮುಂದೆ ನಿಂತು ಮೀಸಲಾತಿ ಕೇಳುವ ತಾಕತ್ತು ಯಾರಿಗೂ ಇಲ್ಲ’ ಎಂದರು.

ಶಾಸಕರು, ಸಂಸದರು ರಾಜೀನಾಮೆ ನೀಡುವುದಾಗಿ ಭರವಸೆ ನೀಡುವ ಬದಲು ರಾಜೀನಾಮೆ ನೀಡಲಿ ಎಂಬ ಒತ್ತಾಯ ಕೇಳಿಬಂತು. ವಿವಿಧ ತಾಲ್ಲೂಕುಗಳ ಮುಖಂಡರು ಮಾತನಾಡಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ, ಶ್ರೀನಿವಾಸ್ ದಾಸ್‌ಕರಿಯಪ್ಪ, ಹದಡಿ ಹಾಲಪ್ಪ, ಶ್ಯಾಗಲೆ ಮಂಜುನಾಥ್, ಆಂಜನೇಯ ಸ್ವಾಮೀಜಿ, ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್, ರಾಜು, ಶಾಮನೂರ್ ಪ್ರವೀಣ್, ಪಣಿಯಪುರ ನಿಂಗರಾಜ್, ಐಗೂರ್ ಹನುಮಂತಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್‌, ಚುಕ್ಕಿ ಮಂಜುನಾಥ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.