ಚನ್ನಗಿರಿ (ದಾವಣಗೆರೆ): ‘ಪ್ರತ್ಯೇಕ ಧರ್ಮ ಪ್ರತಿಪಾದಿಸುವ ಕಾವಿಧಾರಿಗಳೇ, ನಿಮ್ಮ ದೇವರು ಯಾವುದು ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಅಥವಾ ‘ವೀರಶೈವ ಲಿಂಗಾಯತ’ ಎಂದು ಬರೆಸುವಂತೆ ಸೂಚಿಸುತ್ತಿರುವ ಮಠಾಧೀಶರ ವಿರುದ್ಧ ಮಂಗಳವಾರ ಇಲ್ಲಿ ಸುದ್ದಿಗಾರರ ಬಳಿ ಆಕ್ರೋಶ ವ್ಯಕ್ತಪಡಿಸಿದರು.
‘ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹಿಂದೂಗಳ ದೇವರು. ಕ್ರಿಶ್ಚಿಯನ್, ಇಸ್ಲಾಂ ಸೇರಿ ಎಲ್ಲ ಧರ್ಮಗಳಿಗೆ ಒಂದೊಂದು ದೇವರಿದೆ. ಪ್ರತ್ಯೇಕ ಧರ್ಮದ ಬಗ್ಗೆ ಕಾವಿ ಹಾಕಿಕೊಂಡ ನಾಲ್ವರು ಸ್ವಾಮೀಜಿಗಳು ಮಾತನಾಡುತ್ತಿದ್ದಾರೆ. ಬಸವಣ್ಣನ ವಚನಗಳಲ್ಲಿರುವ ಕೂಡಲಸಂಗಮ ಎಂದರೆ ಶಿವ. ಇದು ಹಿಂದೂ ದೇವರು. ಕಾವಿ, ರುದ್ರಾಕ್ಷಿ, ವಿಭೂತಿ ಕೂಡ ಹಿಂದೂ ಧರ್ಮದವು. ಹಾಗಾದರೆ ನಿಮ್ಮದು ಪ್ರತ್ಯೇಕ ಧರ್ಮವಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಪ್ರತ್ಯೇಕ ಧರ್ಮ ಪ್ರತಿಪಾದನೆ ವಿವೇಚನಾರಹಿತ ವಿಚಾರ. ಹಿಂದೂ ಧರ್ಮವನ್ನು ಇಲ್ಲಿಯವರೆಗೆ ಒಡೆದದ್ದು ಸಾಕು. ಶಿವ ಹಿಂದೂ ಧರ್ಮದ ಶಕ್ತಿಶಾಲಿ ದೇವರು. ಇದಕ್ಕೆ ಹೊಸ ವ್ಯಾಖ್ಯಾನ ನೀಡಿ ಗೊಂದಲ ಸೃಷ್ಟಿಸಬೇಡಿ. ರಾಜಕೀಯ ಹಿತಾಸಕ್ತಿಗೆ ಧರ್ಮ ಒಡೆಯಬೇಡಿ. ಸಿದ್ದರಾಮಯ್ಯ ಅವರ ಕುತಂತ್ರಕ್ಕೆ ಬಲಿಯಾಗಬೇಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.