ದಾವಣಗೆರೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಹಣ ಪಡೆದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇದನ್ನು ದಾಖಲೆ ಸಮೇತ ಬಹಿರಂಗಪಡಿಸಲು ಸಿದ್ಧ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ತಿಳಿಸಿದರು.
‘ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷನಿಷ್ಠೆ ಮರೆತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದರು. ಇದಕ್ಕೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇವೆ. ಸಮಯ ಬಂದಾಗ ಬಹಿರಂಗಪಡಿಸುವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ರೇಣುಕಾಚಾರ್ಯ ಅವರು 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಅಗಿರುವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನೆ ಬಾಗಿಲಿಗೂ ಬಂದಿದ್ದರು. ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ನಿರ್ಧಾರ ಬದಲಿಸಿದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ನಾನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬುದಕ್ಕೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧ ಇದ್ದೇನೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಆರೋಪ ಮಾಡಿರುವ ರೇಣುಕಾಚಾರ್ಯ ಇದೇ ರೀತಿ ಪ್ರಮಾಣ ಮಾಡಬೇಕು. ಇದಕ್ಕೆ ಸಿಗಂಧೂರು ಚೌಡೇಶ್ವರಿ, ಕಟೀಲು ಪರಮೇಶ್ವರಿ ಹಾಗೂ ಚನ್ನಗಿರಿ ತಾಲ್ಲೂಕಿನ ಮಾವಿನಹಳ್ಳಿ ಮಹಾರುದ್ರಸ್ವಾಮಿ ದೇಗುಲಕ್ಕೆ ಬರಲಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.