ಪ್ರಜಾವಾಣಿ ವಾರ್ತೆ
ದಾವಣಗೆರೆ: ‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ವತಿಯಿಂದ ಏಪ್ರಿಲ್ 5 ಮತ್ತು 6ರಂದು ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಯುವ ನಾಯಕತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ಎಂ.ಬಸವರಾಜಯ್ಯ ತಿಳಿಸಿದರು.
‘ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ನೇತೃತ್ವದ ಈ ಶಿಬಿರದಲ್ಲಿ ಸ್ವ ಅರಿವು ಮತ್ತು ಸ್ವ ವಿಮರ್ಶೆ ಜೊತೆಗೆ ನಾನೇಕೆ ರಾಜಕೀಯ ಮುಂದಾಳತ್ವ ವಹಿಸಬೇಕು’ ಎಂದು ಬಗ್ಗೆ ವಿವರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ತನ್ನ ಸುತ್ತಮುತ್ತಲಿನ ಸಮಕಾಲೀನ ಸಮಸ್ಯೆಗಳನ್ನು ಮುಖಾಮುಖಿಯಾಗಿ ಎದುರಿಸುವುದು ಹೇಗೆ? ಪ್ರಸ್ತುತ ರಾಜಕೀಯ ಸಮಕಾಲೀನ ಚಿಂತನೆಗಳು, ನಾಯಕತ್ವದ ಗುಣ ಬೆಳೆಸುವುದು, ಭಾಷಣ ಹಾಗೂ ಸಾಮಾಜಿಕ ಜಾಲತಾಣಗಳ ಕೌಶಲದ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು’ ಎಂದರು.
ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೇ, ಸಾರ್ವಜನಿಕರೂ ಶಿಬಿರದಲ್ಲಿ ಭಾಗವಹಿಸಬಹುದು. ಊಟ ಮತ್ತು ವಸತಿ ವ್ಯವಸ್ಥೆ ಇರಲಿದೆ. ಒಬ್ಬರಿಗೆ ₹300 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಹೆಸರನ್ನು ನೋಂದಾಯಿಸಲು 7619353525/ 8749065597 ಕರೆ ಮಾಡಬಹುದು ಎಂದು ತಿಳಿಸಿದರು.
ಮಾರ್ಚ್ 23 ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 3 ವರ್ಷಗಳ ಕಾಲಾವಧಿಗೆ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳಾದ ಕೆ.ಎಸ್.ವೀರಭದ್ರಪ್ಪ, ಪುಟ್ಟನಾಯ್ಕ ಎಲ್., ವಿ.ಬಿ.ಕೃಷ್ಣ, ಮಂಜುನಾಥ್ ಹಳ್ಳಿಕೆರೆ, ಟಿ.ಅಜ್ಜೇಶ್ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.