ADVERTISEMENT

ಕೈಗಾರಿಕೆ ಸ್ಥಾಪನೆ, ಕೆರೆ ತುಂಬಿಸಲು ಆದ್ಯತೆ: ಜಿ.ಎಂ. ಸಿದ್ದೇಶ್ವರ

ಬಿಜೆಪಿ ಅಭ್ಯರ್ಥಿ

ವಿನಾಯಕ ಭಟ್ಟ‌
Published 30 ಏಪ್ರಿಲ್ 2019, 15:34 IST
Last Updated 30 ಏಪ್ರಿಲ್ 2019, 15:34 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ಸತತವಾಗಿ ಮೂರು ಬಾರಿ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ ಅವರು ನಾಲ್ಕನೇ ಬಾರಿಗೂ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಕ್ಷೇತ್ರದ ಹಳ್ಳಿ–ಹಳ್ಳಿಗಳನ್ನು ಸುತ್ತಾಡಿ ‘ಮತಬೇಟೆ’ಯಾಡುತ್ತಿರುವ ಅವರು ಪ್ರಚಾರ ಕಾರ್ಯದ ಒತ್ತಡದ ನಡುವೆಯೇ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ? ಜನರ ಪ್ರತಿಕ್ರಿಯೆ ಹೇಗಿದೆ?

ಎಂಟೂ ಕ್ಷೇತ್ರಗಳಲ್ಲಿ ನಾನು ಪ್ರಚಾರದಲ್ಲಿ ಮುಂದೆ ಇದ್ದೇನೆ. ನಾನು ಹಳ್ಳಿಗಳಿಗೆ ಹಲವು ಬಾರಿ ಬಂದಿದ್ದೇನೆ; ಕೈಗೆ ಸಿಗುತ್ತಿದ್ದೇನೆ. ಕಷ್ಟ–ಸುಖಗಳಿಗೆ ಸ್ಪಂದಿಸಿದ್ದೇನೆ; ಅನುದಾನವನ್ನೂ ಕೊಟ್ಟಿದ್ದೇನೆ ಎಂದು ಜನ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ADVERTISEMENT

* ಮತದಾರರು ನಿಮ್ಮನೇ ಏಕೆ ಆಯ್ಕೆ ಮಾಡಬೇಕು ಎಂದು ಪ್ರತಿಪಾದಿಸುತ್ತೀರಿ?

ಮೂರು ಬಾರಿ ಸಂಸದನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಎಲ್ಲಾ ಊರಿಗೂ ಅನುದಾನ ಕೊಟ್ಟಿದ್ದೇನೆ. ಒಂದೊಂದು ಹಳ್ಳಿಗೂ ಐದಾರು ಬಾರಿ ಭೇಟಿ ಕೊಟ್ಟಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯಿಂದ ಸರ್ವೆ ಇಲಾಖೆವರೆಗಿನ ಎಲ್ಲಾ ಸಮಸ್ಯೆಗಳಿಗೂ ನಾನು ಸ್ಪಂದಿಸುತ್ತಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿ ಹೊಸ ಮುಖ; ಯಾರಿಗೂ ಪರಿಚಯವಿಲ್ಲ. ಹೀಗಾಗಿ ನನ್ನನ್ನೇ ಆಯ್ಕೆ ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.

* ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿಮ್ಮ ಬಳಿ ಯಾವ ಯೋಜನೆಗಳಿವೆ?

ಐದು ವರ್ಷಗಳ ಅವಧಿಯಲ್ಲಿ ₹ 9,927 ಕೋಟಿ ಯೋಜನೆಗಳನ್ನು ತಂದು ಚಾಲನೆ ಮಾಡಿದ್ದೇನೆ. ಅವುಗಳನ್ನು ಪೂರ್ಣಗೊಳಿಸುವುದು ನನ್ನ ಮೊದಲ ಕರ್ತವ್ಯ. ರಸಗೊಬ್ಬರ ಕಾರ್ಖಾನೆ, ಸಿಆರ್‌ಸಿ ಸೆಂಟರ್‌, ಚನ್ನಗಿರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿ ಅಂದಾಜು ₹ 7,000 ಕೋಟಿ ಅನುದಾನದ ವಿವಿಧ ಯೋಜನೆಗಳು ಮಂಜೂರಾತಿ ಹಂತದಲ್ಲಿವೆ. ಹೊಳೆ ನೀರನ್ನು ಬಳಸಿಕೊಂಡು ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲು ಎಲ್ಲಾ ಶಾಸಕರಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟರೆ ಅಲ್ಲಿ ಮಂಜೂರಾತಿ ಪಡೆದು ಹಣ ಕೊಡಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯ ವಿವಿಧೆಡೆ ಕೆರೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ರಾಜ್ಯ ಸರ್ಕಾರ ಸ್ಪಂದಿಸದೇ ಇದ್ದರೆ ದಾವಣಗೆರೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿಯಾದರೂ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ.

* ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು? ಅವುಗಳಿಗೆ ಹೇಗೆ ಪರಿಹಾರ ಕಲ್ಪಿಸುವಿರಿ?

ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆ ಸ್ಥಾಪಿಸಬೇಕಾಗಿದೆ. ವಿಮಾನ ನಿಲ್ದಾಣ ನಿರ್ಮಿಸಬೇಕಾಗಿದೆ. ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಆಗಬೇಕು. ಎಲ್ಲಾ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರು ಲಭಿಸಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತರಕಾರಿ ಬೆಳೆಯುವ ಕಡೆ ಶೀತಲೀಕರಣ ಘಟಕ ನಿರ್ಮಿಸುವ ಗುರಿ ಹೊಂದಿದ್ದೇನೆ.

* ಕೇಂದ್ರದಲ್ಲಿ ನೀವು ವಿಮಾನಯಾನ, ಕೈಗಾರಿಕೆ ಸಚಿವರಾಗಿದ್ದರೂ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವಂತಹ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ ಎಂಬ ದೂರುಗಳಿಗೆ ಏನು ಹೇಳುತ್ತೀರಿ?

ನಾನು 10 ವರ್ಷ ವಿರೋಧ ಪಕ್ಷದಲ್ಲಿದ್ದೆ. ಆಗ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ಅನುದಾನ ತಂದಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಹರಿಹರದಲ್ಲಿ 2ಜಿ ಎಥನಾಲ್‌ ಕೈಗಾರಿಕೆ ಮಂಜೂರು ಮಾಡಿಸಿದ್ದೇನೆ. ವಿಮಾನನಿಲ್ದಾಣ, ಕೈಗಾರಿಕೆ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯ ಭೂಮಿಯನ್ನು ನೀಡಬೇಕು. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಮಂಜೂರು ಮಾಡಿಸಿದರೂ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡುತ್ತಿಲ್ಲ. ಜಾಗ ಕೊಡದಿದ್ದರೆ ನಾವು ಆಕಾಶದಲ್ಲಿ ನಿರ್ಮಿಸಲು ಸಾಧ್ಯವೇ? ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರವೂ ತನ್ನ ಪಾಲು ನೀಡಬೇಕು. ಆದರೆ, ಹಣಕಾಸಿನ ಮುಗ್ಗಟ್ಟು ಮಾಡಿಕೊಂಡು ಹಣ ನೀಡದೇ ಇರುವುದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಕೇಂದ್ರ ಹಾಗೂ ರಾಜ್ಯದಲ್ಲೂ ನಮ್ಮದೆ ಸರ್ಕಾರ ಇದ್ದರೆ ಇಂಥ ಸಮಸ್ಯೆ ಆಗುವುದಿಲ್ಲ.

* ನೀಮ್ಮ ವೈಯಕ್ತಿಕ ಸಾಧನೆಗಿಂತ ‘ಮೋದಿ ಮುಖವಾಡ’ ಹಾಕಿಕೊಂಡು ಮತ ಕೇಳುತ್ತಿದ್ದೀರಿ ಎಂದು ಟೀಕಿಸುತ್ತಿರುವವರಿಗೆ ಏನು ಹೇಳಲು ಬಯಸುತ್ತೀರಿ?

ಪ್ರಧಾನಿಯಾಗಿ ಒಳ್ಳೆಯ ಕೆಲಸ ಮಾಡಿರುವುದರಿಂದ, ದಕ್ಷ ಹಾಗೂ ಸಮರ್ಥ ನಾಯಕರಾಗಿರುವುದರಿಂದ ಮೋದಿ ಹೆಸರನ್ನು ನಾವು ಹೇಳಲೇಬೇಕು. ಜೊತೆಗೆ ನಾನು ಮಾಡಿದ ಕೆಲಸಗಳು, ಪಕ್ಷದ ಶಾಸಕರು ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳನ್ನೂ ಹೇಳುತ್ತಿದ್ದೇನೆ. ಕಾಂಗ್ರೆಸ್‌ನವರು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಹೆಸರು ಹೇಳುವುದನ್ನು ಬಿಟ್ಟಿದ್ದಾರೆಯೇ? ನಮ್ಮ ಪಕ್ಷದ ನಾಯಕರ ಹೆಸರು ಹೇಳದೆ, ರಾಹುಲ್‌ ಗಾಂಧಿ ಹೆಸರು ಹೇಳಲು ಸಾಧ್ಯವೇ?

* ಅನುಕಂಪ–ಯಡಿಯೂರಪ್ಪ–ಮೋದಿ ಅಲೆಯ ಕಾರಣಕ್ಕೆ ನೀವು ಮೂರು ಬಾರಿ ಸಂಸದರಾಗಿದ್ದೀರಿ ಎಂಬ ಮಾತಿದೆ. ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಗೊಂದಲ ನಿಮ್ಮ ಕೈಹಿಡಿಯಲಿದೆಯೇ?

ಮೊದಲನೇ ಬಾರಿ ಅನುಕಂಪ, ಎರಡನೇ ಬಾರಿ ಯಡಿಯೂರಪ್ಪ, ಮೂರನೇ ಬಾರಿ ಮೋದಿ ಅಲೆಯಿಂದ ಗೆದ್ದಿರಬಹುದು. ಈಗ ನಾಲ್ಕನೇ ಬಾರಿಯೂ ನೂರಕ್ಕೆ ನೂರು ಮೋದಿ ಅಲೆ ಹಾಗೂ ನನ್ನ ಸಾಧನೆಯಿಂದ ಗೆಲ್ಲುತ್ತೇನೆ. ಕಾಂಗ್ರೆಸ್‌ ಅಭ್ಯರ್ಥಿ ಮಂಜಪ್ಪ ಜಿಲ್ಲೆಯಲ್ಲಿ ಎಷ್ಟೋ ಕಡೆ ಯಾರು ಎಂಬುದೇ ಗೊತ್ತಿಲ್ಲ. ಹರಪನಹಳ್ಳಿ ಕಡೆ ಅವರ ಸಮಾಜದವರಿಗೆ ಆತನ ಪರಿಚಯ ಇಲ್ಲ.

* ಮೈತ್ರಿಕೂಟದ ಅಭ್ಯರ್ಥಿ ನಿಲ್ಲಿಸಿರುವುದು ನಿಮ್ಮ ಗೆಲುವಿಗೆ ಅಡ್ಡಿಯಾಗಲಿದೆಯೇ?

ಜಿಲ್ಲೆಯಲ್ಲಿ ಜೆಡಿಎಸ್‌ ನೆಲೆ ಅಷ್ಟಾಗಿ ಇಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಹಿಮ ಪಟೇಲ್‌ ಸ್ಪರ್ಧಿಸಿ 46,911 ಮತ ಪಡೆದಿದ್ದರು. ಈಗ ಅವರು ನಮ್ಮ ಪರ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷ ದೊಡ್ಡದಾಗಿ ಬೆಳೆದಾಗ ಕೆಲವರು ಅತೃಪ್ತರಾಗುವುದು ಸಹಜ. ಸಮಾನಮನಸ್ಕರು ಸಭೆ ನಡೆಸಿರುವುದರಿಂದ ಹಾಗೂ ಮೈತ್ರಿಕೂಟದ ಅಭ್ಯರ್ಥಿ ನಿಲ್ಲಿಸಿರುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.