ADVERTISEMENT

ದಾವಣಗೆರೆ: ಉತ್ತಮ ಸೇವೆ ನೀಡದಿದ್ದರೆ ಬಿಎಸ್ಎನ್‌ಲ್ ಖಾಸಗಿ ಪಾಲು

ಕೆಲಸ ಮಾಡಲು ಆಗದಿದ್ದರೆ ನಿವೃತ್ತಿ ಪಡೆಯಿರಿ: ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ಸಂಸದರ ತಾಕೀತು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 7:16 IST
Last Updated 28 ಆಗಸ್ಟ್ 2021, 7:16 IST
ದಾವಣಗೆರೆಯ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಟೆಲಿಕಾಂ ಪ್ರಧಾನ ವ್ಯವಸ್ಥಾಪಕ ಡಿ.ಕೆ ತ್ರಿಪಾಠಿ, ಪ್ರಧಾನ ವ್ಯವಸ್ಥಾಪಕ ಗೋಪಾಲ್ ಪಿ.ಕೆ. ಇದ್ದರು.
ದಾವಣಗೆರೆಯ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಟೆಲಿಕಾಂ ಪ್ರಧಾನ ವ್ಯವಸ್ಥಾಪಕ ಡಿ.ಕೆ ತ್ರಿಪಾಠಿ, ಪ್ರಧಾನ ವ್ಯವಸ್ಥಾಪಕ ಗೋಪಾಲ್ ಪಿ.ಕೆ. ಇದ್ದರು.   

ದಾವಣಗೆರೆ: ಬಿಎಸ್‌ಎನ್ಎಲ್ ದಾವಣಗೆರೆಯಲ್ಲಿ ಲಾಭದಲ್ಲಿದ್ದರೂ ಉತ್ತಮ ಸೇವೆ ಸಿಗುತ್ತಿಲ್ಲ. ಇದರಿಂದಾಗಿ ಜನರು ಇದರಿಂದ ದೂರ ಉಳಿಯುತ್ತಿದ್ದಾರೆ. ಉತ್ತಮ ಸೇವೆ ನೀಡದಿದ್ದರೆ ಸ್ವಯಂ ನಿವೃತ್ತಿ ತೆಗೆದುಕೊಂಡು ಹೋಗಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಶುಕ್ರವಾರ ನಡೆದ ದೂರವಾಣಿ ಪ್ರಾಧಿಕಾರ ಸಲಹಾ ಸಮಿತಿಯಲ್ಲಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

‘ಬಿಎಸ್‌ಎನ್‌ಎಲ್‌ ಎಂದರೆ ಜನರು ಮೂಗುಮುರಿಯುತ್ತಿದ್ದಾರೆ. ಕರೆ ಕಡಿತಗೊಳ್ಳುವುದು, ನೆಟ್‌ವರ್ಕ್ ಸರಿಯಾಗಿ ಸಿಗದೇ ಇರುವುದರಿಂದ ಜನರು ಬೇಸತ್ತಿದ್ದಾರೆ.ನೀವು ಉತ್ತಮವಾಗಿ ಕೆಲಸ ಮಾಡಿದರೆ ಬಿಎಸ್ಎನ್‌ಎಲ್ಉಳಿಯುತ್ತದೆ. ಇಲ್ಲದಿದ್ದರೆ ಖಾಸಗಿಯವರ ಪಾಲಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಈ ಹಿಂದಿನ ಸಭೆಯಲ್ಲೇ ಬಿಎಸ್ಎನ್‌ಎಲ್ ವರ್ಸ್ಟ್ ಎಂದು ಹೇಳಿದ್ದೇ. ಆದರೂ ನೀವು ಎಚ್ಚೆತ್ತುಕೊಂಡಿಲ್ಲ. ಶಿವಮೊಗ್ಗದಲ್ಲಿ ಸರಿಯಾಗಿ ಕೆಲಸ ಮಾಡುತ್ತದೆ. ದಾವಣಗೆರೆಯಲ್ಲಿ ಮಾಡುತ್ತಿಲ್ಲ. ಸರ್ಕಾರದ ಸಂಬಳ ತಿಂದು ಕೆಲಸ ಮಾಡದಿದ್ದರೆ ನಿಮ್ಮ ಹೊಟ್ಟೆ ಮೇಲೆ ನೀವೇ ಹೊಡೆದುಕೊಳ್ಳುತ್ತಿದ್ದೀರಾ’ ಎಂದರು.

ದೂರವಾಣಿ ಸಲಹಾ ಸಮಿತಿ ಸದಸ್ಯ ಡಿ.ಎಸ್. ಶಿವಶಂಕರ್, ‘ಬಿಎಸ್‌ಎನ್‌ಎಲ್‌ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಅದನ್ನು ಯಾರೂ ಸ್ವೀಕರಿಸುತ್ತಿಲ್ಲ. ವಿದ್ಯಾನಗರದ ಶಾಖಾ ಕಚೇರಿಗೆ ಹೋದರೆ ಅಲ್ಲಿ ಕೇಳುವವರು ಇಲ್ಲ.12 ಸಾವಿರ ಲ್ಯಾಂಡ್‌ ಲೈನ್ ಬ್ರಾಡ್‌ಬಾಂಡ್‌ ಸಂಪರ್ಕದಲ್ಲಿ 4 ಸಾವಿರ ಸಂಪರ್ಕ ರದ್ದಾಗಿವೆ. ಸಂಪರ್ಕ ಪಡೆಯುವ ವೇಳೆ ಇಟ್ಟಿದ್ದ ಠೇವಣಿ ಹಣವನ್ನು ಒಂದು ವರ್ಷವಾದರೂ ಹಿಂತಿರುಗಿಸಿಲ್ಲ’ ಎಂಬ ದೂರುಗಳು ಬಂದಿವೆ’ ಎಂದು ಸಂಸದರ ಗಮನಕ್ಕೆ ತಂದರು.

ಲೆಕ್ಕಾಧಿಕಾರಿ ಉತ್ತರಿಸಿ ‘ಜಿಲ್ಲೆಯಲ್ಲಿ 5,255 ಸಂಪರ್ಕಕ್ಕೆ ಠೇವಣಿ ಹಣ ನೀಡಿಲ್ಲ. ₹ 54 ಲಕ್ಷ ಬಾಕಿ ಇದೆ’ ಎಂದರು.

ಇದಕ್ಕೆ ಉತ್ತರಿಸಿದ ಸಂಸದರು,‘ಸಾರ್ವಜನಿಕರ ಹಣ ವಾಪಸ್ನೀಡದಿದ್ದರೆ ದುರುಪಯೋಗವಾಗುತ್ತದೆ. ಶೀಘ್ರ ಠೇವಣಿ ವಾಪಸ್ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಿ ಗ್ರೂಪ್ ನೌಕರರಿಗೆ ವರ್ಷದಿಂದ ವೇತನವಿಲ್ಲ: ‘ಬಿಎಸ್‌ಎನ್‌ಎಲ್ ಕಚೇರಿಯಲ್ಲಿ 27 ‘ಡಿ’ ಗ್ರೂಪ್ ನೌಕರರಿಗೆ ವರ್ಷದಿಂದ ವೇತನ ನೀಡಿಲ್ಲ. ವೇತನ ನೀಡದಿದ್ದರೆ ಅವರು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ’ ಎಂದು ಡಿ.ಎಸ್‌. ಶಿವಶಂಕರ್ ಹೇಳಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ‘ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದ್ದು, ಶೀಘ್ರ ವೇತನ ನೀಡಲಾಗುವುದು’ ಎಂದರು.

ಗುಡ್ಡದ ಪ್ರದೇಶದ ಗ್ರಾಮಗಳಿಗೆ ಟವರ್ ಅಳವಡಿಸಿ:‘ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕುಗಳ ಗುಡ್ಡದ ಪ್ರದೇಶದಲ್ಲಿರುವ ಗ್ರಾಮಗಳಾದ ಎಂ.ಹನುಮನಗಳ್ಳಿ, ಕೆಂಗನಹಳ್ಳಿ, ಪಾಲವನಹಳ್ಳಿ, ನಿಲೋಗಲ್, ಕಗತೂರು, ಅರಬಘಟ್ಟ, ಅಗರಿಬನ್ನಿಹಟ್ಟಿಗಳಲ್ಲಿ ಟವರ್ ಅಳವಡಿಸಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

‘ಜಿಲ್ಲೆಯಲ್ಲಿ 687 ಲೀಸ್ಡ್‌ ಸರ್ಕೀಟ್‌ಗಳು ಇದ್ದು, ಇದರಿಂದಾಗಿ ಒಂದು ವರ್ಷಕ್ಕೆ ₹ 1.50 ಕೋಟಿ ಆದಾಯ ಬರುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನಿರ್ವಹಣೆ ಖಾಸಗಿಗೆ ಎಚ್ಚರಿಕೆ: 132 ಟವರ್‌ಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಿದ್ದು, ಪ್ರತಿ ತಿಂಗಳು ಅವರಿಗೆ ಲಕ್ಷಾಂತರ ರೂಪಾಯಿ ನೀಡಲಾಗುತ್ತಿದೆ. ಆ ಸಂಸ್ಥೆಯವರು ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾದವು.

ಇದಕ್ಕೆ ಉತ್ತರಿಸಿದ ಸಂಸದರು, ‘ಸಮರ್ಪಕವಾಗಿ ಸೇವೆ ನೀಡದಿದ್ದರೆ ಬೇರೆಯವರಿಗೆ ನೀಡಿ’ ಎಂದರು.

ದಾವಣಗೆರೆ ಟೆಲಿಕಾಂ ಪ್ರಧಾನ ವ್ಯವಸ್ಥಾಪಕ ಡಿ.ಕೆ. ತ್ರಿಪಾಠಿ ಮಾತನಾಡಿ, ‘ಹಣಕಾಸು ಸಮಸ್ಯೆ, ಸರ್ಕಾರಿ ಕಾಮಗಾರಿ, ವಿದ್ಯುತ್ ಸಮಸ್ಯೆಯಿಂದಾಗಿ ಬಿಎಸ್‌ಎನ್ಎಲ್ ಸಮರ್ಪಕ ಸೇವೆ ನೀಡಲು ಆಗುತ್ತಿಲ್ಲ. ಅನೇಕ ಸವಾಲುಗಳ ನಡುವೆಯೂ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲ್ ಪಿ.ಕೆ, ಸಲಹಾ ಸಮಿತಿ ಸದಸ್ಯರಾದ ಹರೀಶ್, ಹನುಮಂತಪ್ಪ, ಮೋತ್ಯಾನಾಯ್ಕ್, ಜಿ. ರೇವಣಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.