ADVERTISEMENT

3 ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 6:49 IST
Last Updated 19 ಸೆಪ್ಟೆಂಬರ್ 2021, 6:49 IST
ದಾವಣಗೆರೆ ಪಿ.ಜಿ.ಬಡಾವಣೆಯ ಡಾ.ಎಂ.ಸಿ. ಮೋದಿ ರಸ್ತೆಯಲ್ಲಿ ₹125 ಕೋಟಿ ವೆಚ್ಚದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ (ಎಂಜಿಎನ್‌ವಿವೈ) ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ದಾವಣಗೆರೆ ಪಿ.ಜಿ.ಬಡಾವಣೆಯ ಡಾ.ಎಂ.ಸಿ. ಮೋದಿ ರಸ್ತೆಯಲ್ಲಿ ₹125 ಕೋಟಿ ವೆಚ್ಚದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ (ಎಂಜಿಎನ್‌ವಿವೈ) ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.   

ದಾವಣಗೆರೆ: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಮೂರು ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಪಿ.ಜಿ.ಬಡಾವಣೆಯ ಡಾ.ಎಂ.ಸಿ. ಮೋದಿ ರಸ್ತೆಯಲ್ಲಿ ₹125 ಕೋಟಿ ವೆಚ್ಚದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ (ಎಂಜಿಎನ್‌ವಿವೈ) ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಟೊಮೊಬೈಲ್ ಕ್ಷೇತ್ರಗಳಲ್ಲಿ ಕ್ಲಸ್ಟರ್‌ಗಳನ್ನು ಹೆಚ್ಚು ಮಾಡುವ ಉದ್ದೇಶವಿದ್ದು, ನಾನೇ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದೇನೆ’ ಎಂದರು.

ADVERTISEMENT

₹ 1500 ಕೋಟಿ ವೆಚ್ಚದ ಕಾಮಗಾರಿ:ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ₹ 1500 ಕೋಟಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ. ದಾವಣಗೆರೆಯಲ್ಲೂ ಹಲವು ಕಾಮಗಾರಿಗಳಿಗೆ ಒಂದೇ ಕಡೆ ಭೂಮಿಪೂಜೆ ನೆರವೇರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳ ಜೊತೆ ಎಂಜಿಎನ್‌ವಿವೈ ಸೇರಿಸಿಕೊಂಡಾಗ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

‘ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಹಲವು ಹಣಕಾಸಿನ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದಾಗ ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ₹25 ಲಕ್ಷ ಅನುದಾನ ಸಿಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

10 ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿ:ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೇಷ್ಠ ಗುಣಮಟ್ಟ ಇದೆ. ವಿದೇಶದಿಂದ ಆಮದಾಗುವ ರೇಷ್ಮೆಗೆ ಸರಿಸಮಾನವಾಗಿದ್ದದರಿಂದ ನಮ್ಮ ರಾಜ್ಯದ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. 8ರಿಂದ 10 ಜಿಲ್ಲೆಗಳಲ್ಲಿ ವ್ಯಾಪಕವಾಗಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆ ಚರ್ಚಿಸಿದ್ದೇನೆ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ.ರವೀಂದ್ರನಾಥ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ,ಮೇಯರ್ ಎಸ್‌.ಟಿ.ವೀರೇಶ್, ಮಾಜಿ ಉಪಮೇಯರ್ ಸೌಮ್ಯ ನರೇಂದ್ರಕುಮಾರ್ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಕೆ.ಟಿ.ವೀರೇಶ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸ್‌ಪಿ.ಸಿ.ಬಿ.ರಿಷ್ಯಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.