ADVERTISEMENT

ಅನರ್ಹರಿಗೆ ಕಿಟ್ ವಿತರಣೆ; ಕಾರ್ಮಿಕರಿಗೆ ಅನ್ಯಾಯ ಆರೋಪ

ಮಾಜಿ ಶಾಸಕ ಡಿ.ಜಿ. ಶಾಂತನಗೌಡರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:15 IST
Last Updated 28 ಮಾರ್ಚ್ 2023, 5:15 IST
ಹೊನ್ನಾಳಿ ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಕಿಟ್‌ ನೀಡದೆ ಅನರ್ಹರಿಗೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಹೊನ್ನಾಳಿ ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಕಿಟ್‌ ನೀಡದೆ ಅನರ್ಹರಿಗೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಹೊನ್ನಾಳಿ: ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ನೀಡಬೇಕಾದ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೆ ಅನರ್ಹರಿಗೆ ನೀಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಕೆಲವು ವೃತ್ತಿಗೆ ಸಂಬಂಧಿಸಿದ ಟೂಲ್‍ಕಿಟ್ ಹಾಗೂ ಅವರ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಕಿಟ್‍ಗಳನ್ನು ಕೊಡುತ್ತಿದೆ. ಆದರೆ, ಇಲ್ಲಿನ ಅಧಿಕಾರಿಗಳು ಮಾತ್ರ ಅರ್ಹ ಫಲಾನುಭವಿಗಳಿಗೆ ನೀಡದೆ ಅನರ್ಹರಿಗೆ ನೀಡುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ADVERTISEMENT

‘ಮಹಿಳೆಯರು ಮತ್ತು ಅವರ ಮಕ್ಕಳು ನಮ್ಮ ಬಳಿ ಬಂದು ‘ನಮಗೆ ಕಾರ್ಮಿಕ ಇಲಾಖೆಯಿಂದ ತೊಂದರೆ ಆಗುತ್ತಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ. ಅದನ್ನು ವಿಚಾರಿಸಲು ಕಾರ್ಮಿಕ ಇಲಾಖೆ ಕಚೇರಿಗೆ ಹೋದರೆ ಅವರು ಬೀಗ ಹಾಕಿಕೊಂಡು ಹೋಗಿದ್ದಾರೆ. ಕಳೆದ ಭಾನುವಾರವೇ ಕಿಟ್‍ಗಳು ಬಂದಿವೆ. ಅವುಗಳನ್ನು ಸೋಮವಾರ ಕೊಡಬೇಕಿತ್ತು. ಆದರೆ, ಅರ್ಹರಿಗೆ ಕೊಡದೆ ಅನರ್ಹರಿಗೆ ಕೊಟ್ಟಿದ್ದಾರೆ ಎಂದ ತಿಳಿದು ಬಂದಿದೆ’ ಎಂದು ದೂರಿದರು.

‘ಈ ಬಗ್ಗೆ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದು, ಮಂಗಳವಾರ ನಮಗೆ ಸಂಪೂರ್ಣ ಮಾಹಿತಿ ಕೊಡಬೇಕು ಎಂದು ಆಗ್ರಹಿಸಿದ್ದೇವೆ’ ಎಂದು ತಿಳಿಸಿದರು.

ಈ ಬಗ್ಗೆ ತಹಶೀಲ್ದಾರ್ ತಿರುಪತಿ ಪಾಟೀಲ್ ಪ್ರತಿಕ್ರಿಯಿಸಿ, ‘ದೂರಿನ ಬಗ್ಗೆ ಕಾರ್ಮಿಕ ಇಲಾಖೆಯ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲಿಂದ ಸಂಪೂರ್ಣ ಮಾಹಿತಿ ಬಂದ ತಕ್ಷಣ ತಮಗೆ ತಿಳಿಸುತ್ತೇನೆ. ಕಿಟ್‍ಗಳನ್ನು ವಿತರಿಸುವಾಗ ಅರ್ಹ ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ಕಂಡು ಬಂದರೆ ತಕ್ಷಣ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಯ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್‌ನ ಯುವ ವಕ್ತಾರ ದರ್ಶನ್ ಬಳ್ಳೇಶ್ವರ್, ಮುಖಂಡರಾದ ಬಿ. ಸಿದ್ದಪ್ಪ, ಎನ್‍ಎಸ್‍ಯುಐ ಅಧ್ಯಕ್ಷ ಮನೋಜ್ ವಾಲಜ್ಜಿ, ಪ್ರಶಾಂತ್ ಬಣ್ಣಜ್ಜಿ ಸೇರಿದಂತೆ ಮಹಿಳೆಯರು, ನೂರಾರು ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.