ADVERTISEMENT

ಅತ್ಯಾಚಾರ, ಕೊಲೆ, ಮರಣದಂಡನೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:26 IST
Last Updated 5 ಅಕ್ಟೋಬರ್ 2020, 14:26 IST
ಉತ್ತರಪ್ರದೇಶದ ಹಾಥರಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಯುವತಿ ಮೃತಪಡಲು ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಹಿಳಾ ಮುನ್ನಡೆ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಉತ್ತರಪ್ರದೇಶದ ಹಾಥರಸ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಯುವತಿ ಮೃತಪಡಲು ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಹಿಳಾ ಮುನ್ನಡೆ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಮರಣದಂಡನೆ ಬಗ್ಗೆ ಸರಿಯಾದ ಮಾರ್ಗವಲ್ಲ ಅತ್ಯಾಚಾರ, ಕೊಲೆಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕು ಎಂದು ಮಹಿಳಾ ಮುನ್ನಡೆ ಜಿಲ್ಲಾ ಸಮಿತಿ ಆಗ್ರಹಿಸಿತು.

ಸರಣಿಯೋಪಾದಿಯಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಬರ್ಬರ ಅತ್ಯಾಚಾರ, ಕೊಲೆ ಮತ್ತು ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ’ಮರಣದಂಡನೆ’ಯ ಪ್ರಯೋಗಗಳನ್ನು, ಮಹಿಳಾ ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿಯುಳ್ಳವರು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ಸ್ತ್ರೀ ಆಗಿರುವ ಕಾರಣಕ್ಕಾಗಿ ನಡೆಯಬಹುದಾದ ಲೈಂಗಿಕ ಹಿಂಸಾಚಾರಗಳು ಒಂದೆಡೆಯಾದರೆ, ಜಾತಿ, ವರ್ಗ, ಧರ್ಮ ಅಥವಾ ರಾಷ್ಟ್ರೀಯತೆಗಳ ಕಾರಣಕ್ಕೆ ಅಂಚಿಗೊತ್ತಲ್ಪಟ್ಟ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸಾಚಾರಗಳಿಗಿರುವ ಆಯಾಮಗಳು ಬೇರೆ ಎಂದು ವಿವರಿಸಿದರು.

ADVERTISEMENT

ಅತ್ಯಾಚಾರಗಳು ಕೇವಲ ಲೈಂಗಿಕ ವಾಂಛೆಯಿಂದ ನಡೆಯುವುದಿಲ್ಲ. ಹಿಂಸೆಯನ್ನು ಸಣ್ಣ ವಯಸ್ಸಿನಿಂದ ನೋಡಿ ಬೆಳೆದ ಅಥವಾ ಅನುಭವಿಸಿದ ಮಕ್ಕಳು ದೊಡ್ಡವರಾದಾಗ ಹಿಂಸೆಯ ಪ್ರವರ್ತಕರಾಗುತ್ತಿದ್ದಾರೆ. ಹಿರಿಯರು ನಡೆಸುವ ಹಿಂಸೆಗಳನ್ನು ನಿಲ್ಲಿಸುವ ಮತ್ತು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಮಾನತೆಯ ಪಾಠವನ್ನು ಆಳವಾಗಿ ಕಲಿಸಬೇಕು. ತಾರತಮ್ಯಗಳನ್ನು ನಿರಾಕರಿಸುವ ಪಠ್ಯಕ್ರಮವನ್ನು ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಾ ಹದಿವಯಸ್ಸಿನ ಗೊಂದಲದಲ್ಲಿರುವ ಮಕ್ಕಳನ್ನು ತಪ್ಪುದಾರಿಗೆಳೆಯುವ ಜಾಲತಾಣ, ಸಿನೆಮಾ, ಜಾಹೀರಾತುಗಳನ್ನೂ ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.

ಮಾನವ ಬಂಧುತ್ವ ವೇದಿಕೆ, ಭೀಮ್‌ ಆರ್ಮಿ, ಕರ್ನಾಟಕ ಜನಶಕ್ತಿ ಸಹಯೋಗ ನೀಡಿದ್ದವು. ಜನಶಕ್ತಿಯ ಸತೀಶ್ ಅರವಿಂದ್, ಆದೀಲ್ ಖಾನ್, ಮಾನವ ಬಂಧುತ್ವ ವೇದಿಕೆಯ ಮಾಡಾಳ್ ಶಿವಕುಮಾರ್, ಕಂಬರಾಜ್, ಖಲೀಲ್, ಯಲ್ಲಪ್ಪ, ಶಿವು, ಮಹಮ್ಮದ್ ರಫೀಕ್, ಮಂಜುನಾಥ್, ಮಾರುತಿ, ಸಿದ್ದರಾಮಣ್ಣ, ಹನುಮಂತ, ಬಸವರಾಜ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.