ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ, ಅಶ್ಲೀಲತೆ, ಮದ್ಯಪಾನ ಹಾವಳಿಯ ವಿರುದ್ಧ ಎಐಎಂಎಸ್‌ಎಸ್ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಚಳವಳಿಯ ಭಾಗವಾಗಿ ಈ ಪ್ರತಿಭಟನೆ ನಡೆಯಿತು.
‘ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಬಾಲ್ಯವಿವಾಹ, ಬಾಲಗರ್ಭಿಣಿಯರ ಪ್ರಕರಣಗಳು ಆತಂಕ ಮೂಡಿಸಿವೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಬನಶ್ರೀ ಆಗ್ರಹಿಸಿದರು.
‘ಲಿಂಗ ತಾರತಮ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ ಹಾಗೂ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಹೆಣ್ಣನ್ನು ಭೋಗದ ವಸ್ತು ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಸಮಾಜದಲ್ಲಿ ಅಪರಾಧಗಳು ಹೆಚ್ಚಲು ಪ್ರೇರೇಪಿಸುತ್ತಿದೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳು ಕುಸಿಯುತ್ತಿವೆ’ ಎಂದು ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಬಿ.ಆರ್. ಅಪರ್ಣಾ ಬೇಸರ ವ್ಯಕ್ತಪಡಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಅಧ್ಯಕ್ಷೆ ರಶ್ಮಿ, ಕಾರ್ಯದರ್ಶಿ ಕೆ. ಭಾರತಿ, ಮುಖಂಡರಾದ ಮಮತಾ, ಮಂಜುಳಾ, ಸರಸ್ವತಿ, ಶಶಿ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.