ADVERTISEMENT

ಹರಿಹರ: ಪೌರಾಯುಕ್ತರ ವರ್ತನೆ ಖಂಡಿಸಿ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:11 IST
Last Updated 24 ಅಕ್ಟೋಬರ್ 2024, 14:11 IST
ಹರಿಹರದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಕೆಲ ಸದಸ್ಯರು ಪೌರಾಯುಕ್ತರ ವರ್ತನೆ ಖಂಡಿಸಿ ಬುಧವಾರ ಸಂಜೆ ಧರಣಿ ನಡೆಸಿದರು
ಹರಿಹರದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಕೆಲ ಸದಸ್ಯರು ಪೌರಾಯುಕ್ತರ ವರ್ತನೆ ಖಂಡಿಸಿ ಬುಧವಾರ ಸಂಜೆ ಧರಣಿ ನಡೆಸಿದರು    

ಹರಿಹರ: ನಗರಸಭೆ ಪೌರಾಯುಕ್ತರ ವರ್ತನೆ ಖಂಡಿಸಿ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ಹಲವು ನಗರಸಭಾ ಸದಸ್ಯರು, ಮುಖಂಡರು ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಅವರು ಸಾರ್ವಜನಿಕರಿಗೆ ಕಚೇರಿಯಲ್ಲಿ ಸಿಗುವುದಿಲ್ಲ. ಅವರನ್ನು ಭೇಟಿ ಮಾಡಲು ಬರುವವರು, ನಗರಸಭಾ ಸದಸ್ಯರು ಅವರ ಕೊಠಡಿ ಎದುರು ಗಂಟೆಗಟ್ಟಲೆ ಕಾದು ನಿರಾಶೆಯಿಂದ ತೆರಳುತ್ತಾರೆ. ನಂತರ ನನ್ನ ಬಳಿ ಬಂದು ಪೌರಾಯುಕ್ತರು ನಮಗೆ ಸಿಗುವುದೇ ಇಲ್ಲ. ಪೌರಾಯುಕ್ತರಿಗೆ ನೀವಾದರೂ ಕಚೇರಿಯಲ್ಲಿರುವಂತೆ ಸೂಚಿಸಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದು ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಆರೋಪಿಸಿದರು.

ಕರ್ತವ್ಯದ ಅವಧಿಯಲ್ಲಿ ಅವರು ಜನರ ಕೈಗೆ ಸಿಗದಿರುವುದರಿಂದ ನಾನು ಜನರು ಹಾಗೂ ನಗರಸಭಾ ಸದಸ್ಯರ ಸಿಟ್ಟನ್ನು ಎದುರಿಸಬೇಕಾಗಿದೆ. ನಾನು ಅಧ್ಯಕ್ಷೆಯಾಗಿ 2 ತಿಂಗಳಾದರೂ ನನ್ನೊಂದಿಗೆ ಒಮ್ಮೆಯೂ ಚರ್ಚಿಸಿಲ್ಲ. ಹಗಲಿನಲ್ಲಿ ಗೈರಾಗುವ ಪೌರಾಯುಕ್ತರು ಸಂಜೆ ವೇಳೆಗೆ ಬಂದು ಕೊಠಡಿಯಲ್ಲಿ ಕುಳಿತು ಕಡತಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಆರೋಪಿಸಿದರು.

ADVERTISEMENT

ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಮಾತುಗಳಿಗೆ ಬೆಲೆ ಕೊಡದೆ ಹೊರಗಿನ ವ್ಯಕ್ತಿಯೊಬ್ಬರ ಅಣತಿಯಂತೆ ಇವರು ಕೆಲಸ ಮಾಡುತ್ತಿದ್ದಾರೆ. ಇಂತಹ ಪೌರಾಯುಕ್ತರಿಂದ ನಗರದ ಅಭಿವೃದ್ಧಿಗೆ, ಜನರ ಸಮಸ್ಯೆ ನಿವಾರಣೆಗೆ ತೊಡಕಾಗಿದೆ. ಇವರನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಗರಸಭಾ ಸದಸ್ಯರಾದ ದಾದಾ ಖಲಂದರ್, ಆರ್.ಸಿ.ಜಾವೀದ್, ಬಿ.ಅಲ್ತಾಫ್, ಮುಖಂಡರಾದ ಮದ್ದಿ ಮನ್ಸೂರ್, ಮಾರುತಿ ಬೇಡರ್, ಎಂ.ಆರ್.ಸೈಯದ್ ಸನಾಉಲ್ಲಾ, ಫೈನಾನ್ಸ್ ಮಂಜಣ್ಣ, ಜಾಕಿರ್ ಹುಸೇನ್ ಪಾಲ್ಗೊಂಡಿದ್ದರು.

15ನೇ ಹಣಕಾಸಿನ ಯೋಜನೆ ಸೇರಿ ಇತರೆ ಯೋಜನೆಗಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ 3–4 ವರ್ಷಗಳಿಂದ ನಡೆಯದೆ ನನೆಗುದಿಗೆ ಬಿದ್ದಿವೆ. ಆ ಟೆಂಡರ್ ಪ್ರಕ್ರಿಯೆಗಳಿಗೆ ನಾನು ಚಾಲನೆ ನೀಡುತ್ತಿದ್ದೇನೆ. ಅತಿವೃಷ್ಟಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಆಗಿರುವ ಹಾನಿ ಪರಿಶೀಲಿಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಬೆಳಿಗ್ಗೆ 8 ರಿಂದಲೇ ವಾರ್ಡ್‌ಗಳಿಗೆ ತೆರಳಿ ಸಮಸ್ಯೆ ಆಲಿಸುತ್ತಿದ್ದೇನೆ. ಆದಕಾರಣ ಕಚೇರಿಯಲ್ಲಿ ಕೆಲ ಸಮಯ ಇರುತ್ತಿಲ್ಲ. ಅದನ್ನು ಬಿಟ್ಟು ಬೇರೆ ಕಾರಣಗಳಿಲ್ಲ ಎಂದು ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.