ADVERTISEMENT

ರೇಣುಕಾಚಾರ್ಯ ಹೇಳಿಕೆ ಖಂಡಿಸಿ ಪ್ರತಿಭಟನೆ

ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:29 IST
Last Updated 23 ಜನವರಿ 2020, 14:29 IST
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಮುಸ್ಲಿಂ ವಿರೋಧಿ ಹೇಳಿಕೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ದಾವಣಗೆರೆಯ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಮುಸ್ಲಿಂ ವಿರೋಧಿ ಹೇಳಿಕೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ದಾವಣಗೆರೆಯ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು   

ದಾವಣಗೆರೆ: ಶಾಸಕ ರೇಣುಕಾಚಾರ್ಯ ಮುಸ್ಲಿಂ ಸಮುದಾಯದ ಕ್ಷಮೆ ಕೇಳದಿದ್ದರೆ ಹೊನ್ನಾಳ್ಳಿ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂವಿಧಾನ ಉಳಿವಿಗಾಗಿ ವೇದಿಕೆಯ ಟಿ.ಅಸ್ಗರ್ ಎಚ್ಚರಿಕೆ ನೀಡಿದರು.

ಶಾಸಕ ರೇಣುಕಾಚಾರ್ಯ ನೀಡಿರುವ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಖಂಡಿಸಿ ಉಪ ವಿಭಾಗಾಧಿಕಾಗಳ ಕಚೇರಿ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಜನಪ್ರತಿನಿಧಿಯಾಗಿರುವ ರೇಣುಕಾಚಾರ್ಯ ಒಂದು ಸಮುದಾಯದ ವಿರುದ್ದವಾಗಿ ಮಾತನಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಕದಡುವು ಕೆಲಸ ಮಾಡಿದ್ದಾರೆ. ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಸರ್ವ ಜನರು ಇಲ್ಲಿ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಇದನ್ನು ಅರಿಯದ ರೇಣುಕಾಚಾರ್ಯ ಅವಿವೇಕಿ ತರಹ ಮಾತನಾಡಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಮಸೀದಿಗಳಲ್ಲಿ ಶಸ್ತಾಸ್ತ್ರ ಇರುವ ಬಗ್ಗೆ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಜಮೀರ್ ಅಹಮದ್, ‘ಶಾಸಕರು ಮಂತ್ರಿ ಪಟ್ಟ ಗಿಟ್ಟಿಸಲು ಮುಸ್ಲಿಂ ಸಮುದಾಯದ ವಿರುದ್ದ ಅಸಂವಿಧಾನಕ ಹೇಳಿಕೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಬಿಜೆಪಿಯಲ್ಲಿ ಈ ರೀತಿ ಮಾತನಾಡಲು ಸ್ಪರ್ಧೆ ಆರಂಭಗೊಂಡಿದೆ. ಸೋಮಶೇಖರ ರೆಡ್ಡಿ, ಯತ್ನಾಳ ಸೇರಿ ಹಲವರು ಇದೇ ರೀತಿ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ದಂತೆ ಇತರರು ಮುಸ್ಲಿಂ ಸಮುದಾಯದ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೇಣುಕಾಚಾರ್ಯ ಲೈಂಗಿಕ ಪ್ರಕರಣದಲ್ಲಿ ವಿಶ್ವದಲ್ಲಿ ಕುಖ್ಯಾತಿ ಗಳಿಸಿದ್ದಾರೆ ಎಂದು ದೂರಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿನ ಕರಿಬಸಪ್ಪ ಮಾತನಾಡಿ, ‘ಶಾಸಕರು ಅವರ ಮನೆಯಿಂದ ಅನುದಾನ ತಂದು ನೀಡುವುದಿಲ್ಲ. ಅವರ ಮನೆಯ ಅನುದಾನವು ನಮಗೆ ಬೇಕಿಲ್ಲ. ಜನರ ತೆರಿಗೆ ಹಣ ಎಲ್ಲರಿಗೂ ಸೇರಬೇಕಿದೆ. ಅದರಂತೆ ಸಂವಿಧಾನದತ್ತವಾಗಿ ಪ್ರತಿಯೊಬ್ಬರಿಗೂ ಸಿಗಲಿದೆ. ಬಿಜೆಪಿಗೆ ಮತ ನೀಡಿದ್ದರೆ ಅನುದಾನ ಕೊಡಲ್ಲ ಎನ್ನುವ ಹೇಳಿಕೆ ಶೋಭೆಯಲ್ಲ. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ನಗರಸಭೆಯ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ, ಜನಶಕ್ತಿಯ ಸತೀಶ್ ಅರವಿಂದ್, ಭೀಮಾ ಅರ್ಮಿಯ ಅಬ್ದುಲ್ ಘನಿ, ಟಿಪ್ಪು ಸುಲ್ತಾನ್‌ ಟ್ರಸ್ಟ್‌ನ ಮೆಹಬೂಬ್ ಬಾಷಾ, ಆದಿಲ್ ಖಾನ್, ಫರ್ವಿನ್, ಅನ್ವರ್ , ಗುರುಮೂರ್ತಿ, ಅಹ್ಮದ್ ಬಾಷಾ, ಎನ್‌ಎಸ್‌ಯುಐನ ಮುಜಾಹಿದ್ ಪಾಷ, ಎಲ್‌.ಎಂ.ಎಚ್‌. ಸಾಗರ್, ತಬ್ರೇಜ್‌, ಲಿಯಾಖತ್ ಆಲಿ, ಜಾವಿದ್, ಸಾದಿಕ್, ಸೈಯದ್ ಆರಿಫ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.