ADVERTISEMENT

ಸಂಗೀತದಿಂದ ಮಾನಸಿಕ ನೆಮ್ಮದಿ

ಸುಗಮ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 4:01 IST
Last Updated 11 ಅಕ್ಟೋಬರ್ 2021, 4:01 IST
ದಾವಣಗೆರೆಯ ರೋಟರಿ ಬಾಲಭವನದಲ್ಲಿ ದಾವಣಗೆರೆ ಜಿಲ್ಲಾ ವಾದ್ಯವೃಂದ ಕಲಾವಿದರ ಸಂಘ ಆಯೋಜಿಸಿದ್ದ ಸುಗಮ ಸಂಗೀತೋತ್ಸವ 2021 ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿಯವರ ಡ್ರಮ್ಸ್‌ ಭಾರಿಸುವ ಮೂಲಕ ಉದ್ಘಾಟಿಸಿದರು. ಮೇಯರ್ ಎಸ್.ಟಿ. ವೀರೇಶ್, ಅಧ್ಯಕ್ಷ ಆರ್. ಪರಮೇಶ್ವರಪ್ಪ, ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗ ಇದ್ದರು.
ದಾವಣಗೆರೆಯ ರೋಟರಿ ಬಾಲಭವನದಲ್ಲಿ ದಾವಣಗೆರೆ ಜಿಲ್ಲಾ ವಾದ್ಯವೃಂದ ಕಲಾವಿದರ ಸಂಘ ಆಯೋಜಿಸಿದ್ದ ಸುಗಮ ಸಂಗೀತೋತ್ಸವ 2021 ಕಾರ್ಯಕ್ರಮವನ್ನು ವಿರಕ್ತಮಠದ ಬಸವಪ್ರಭು ಸ್ವಾಮೀಜಿಯವರ ಡ್ರಮ್ಸ್‌ ಭಾರಿಸುವ ಮೂಲಕ ಉದ್ಘಾಟಿಸಿದರು. ಮೇಯರ್ ಎಸ್.ಟಿ. ವೀರೇಶ್, ಅಧ್ಯಕ್ಷ ಆರ್. ಪರಮೇಶ್ವರಪ್ಪ, ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗ ಇದ್ದರು.   

ದಾವಣಗೆರೆ: ಆಧುನಿಕತೆ ಹೆಚ್ಚಿದಂತೆ ಸೌಲಭ್ಯವೂ ಹೆಚ್ಚುತ್ತಿದೆ. ಜತೆಗೆ ಒತ್ತಡವೂ ಅಧಿಕವಾಗುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಧ್ಯಾನ ಮತ್ತು ಸಂಗೀತದಿಂದ ಈ ಒತ್ತಡ ನಿರ್ವಹಣೆಯಾಗುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಜಿಲ್ಲಾ ವಾದ್ಯವೃಂದ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ರೋಟರಿ ಬಾಲಭವನದಲ್ಲಿ ನಡೆದ ಸುಗಮ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಒತ್ತಡದಿಂದಲೇ ಬಿಪಿ, ಶುಗರ್‌ ಬರುತ್ತದೆ. ಬಹಳ ಮಂದಿ ಒತ್ತಡ ನಿರ್ವಹಣೆಗಾಗಿ ಬಾಟಲ್‌ಗಳ ಮೊರೆಹೋಗುತ್ತಾರೆ. ಬಾರಲ್ಲಿ ಕುಳಿತುಕೊಳ್ಳುತ್ತಾರೆ. ಕಲಾವಿದರು ಕೂಡ ಇಂಥ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ. ಚಟಗಳು ಆರೋಗ್ಯವನ್ನು ಕ್ಷೀಣಿಸುವಂತೆ ಮಾಡುತ್ತವೆ. ಚಟ್ಟದ ಕಡೆಗೆ ಒಯ್ಯುತ್ತವೆ. ಹಾಗಾಗಿ ಚಟದಿಂದ ದೂರ ಇರಬೇಕು. ಒಬ್ಬ ಕಲಾವಿದ ಇಲ್ಲವಾದರೆ ಅಂಥ ಮತ್ತೊಬ್ಬ ಕಲಾವಿದ ಹುಟ್ಟಲಾರ ಎಂದು ತಿಳಿಸಿದರು.

ADVERTISEMENT

‘ಹಿಂದೆ ಮಲಗುವ ಹೊತ್ತಿಗೆ ರೇಡಿಯೊದಲ್ಲಿ ಶಹನಾಯ್‌, ಸಿತಾರ, ಶಾಸ್ತ್ರೀಯ ಸಂಗೀತ ಕೇಳುತ್ತಾ ಹಾಗೇ ನಿದ್ದೆ ಹೋಗುತ್ತಿದ್ದೆವು. ಯಾವ ನಿದ್ದೆ ಮಾತ್ರೆಯೂ ಇಲ್ಲದೇ ಚೆನ್ನಾಗಿ ನಿದ್ದೆ ಮಾಡಬಹುದು. ಸ್ವಾಮೀಜಿಗಳು ಧ್ಯಾನ ಮಾಡಿ ನೆಮ್ಮದಿ ಕಂಡುಕೊಳ್ಳುತ್ತಾರೆ. ಧ್ಯಾನ ಮಾಡದವರು ಸಂಗೀತದ ಮೂಲಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯ’ ಎಂದು ವಿವರಿಸಿದರು.

‘ಕಲಾವಿದರು ವೃತ್ತಿಪರ ಆಗುವ ಬದಲು ಹವ್ಯಾಸಿಗಳಾಗಬೇಕು. ಅಂದರೆ ಒಂದೇ ವೃತ್ತಿಯನ್ನು ಅವಲಂಬಿಸಿದಾಗ ಆ ವೃತ್ತಿಗೆ ತೊಂದರೆಯಾದಾಗ ಬದುಕು ಕಷ್ಟವಾಗಿ ಬಿಡುತ್ತದೆ. ಅದರ ಬದಲು ಬಹು ಕೌಶಲಗಳಿದ್ದರೆ ಒಂದಲ್ಲ ಒಂದು ಕೈ ಹಿಡಿಯುತ್ತದೆ. ಕಲಾವಿದರಿಗೆ ನಮ್ಮ ಮಠ ಯಾವಾಗಲೂ ತೆರೆದಿರುತ್ತದೆ. ನಮ್ಮಲ್ಲಿ ಸಂಗೀತ ಪ್ರದರ್ಶನ ನೀಡಬಹುದು’ ಎಂದು ತಿಳಿಸಿದರು.

ಮೇಯರ್‌ ಎಸ್‌.ಟಿ. ವೀರೇಶ್‌ ಉದ್ಘಾಟಿಸಿದರು. ಜಿಲ್ಲಾ ವಾದ್ಯವೃಂದ ಕಲಾವಿದರ ಸಂಘದ ಅಧ್ಯಕ್ಷ ಆರ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು, ಧರ್ಮರಾಜ್,ಪರಮೇಶ್ವರ್‌ ಇದ್ದರು.

ಪಾಲಿಕೆಯಿಂದ ಪ್ರತಿ ತಿಂಗಳು ಮನರಂಜನಾ ಕಾರ್ಯಕ್ರಮ: ಮೇಯರ್‌ ವೀರೇಶ್‌

ಪಾಲಿಕೆ ವತಿಯಿಂದ ಪ್ರತಿ ತಿಂಗಳಿಗೊಮ್ಮೆ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಮೇಯರ್‌ ಎಸ್.ಟಿ. ವೀರೇಶ್ ಹೇಳಿದರು.

ಮಹಾನಗರ ಪಾಲಿಕೆ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್ ಮಂಟಪದಲ್ಲಿ ತಿಂಗಳಿಗೊಂದು ಮನರಂಜನಾ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಕೊರೊನಾ ಬಂದ ಮೇಲೆ ಸ್ಥಗಿತವಾಗಿದೆ. ಮತ್ತೆ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಪುಟ್ಟಣ್ಣ ಕಣಗಾಲ್‌ ಮಂಟಪವನ್ನು ನವೀಕರಣ ಮಾಡುವ ಮತ್ತು ಪುಟ್ಟಣ್ಣ ಅವರ ಪ್ರತಿಮೆ ಸ್ಥಾಪಿಸುವ ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ. ಈ ಕೆಲಸ ಶೀಘ್ರ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.