ADVERTISEMENT

ಇನ್ನಷ್ಟು ಪಿಯು ಕಾಲೇಜು ಆರಂಭಕ್ಕೆ ಚಿಂತನೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 21:31 IST
Last Updated 13 ಸೆಪ್ಟೆಂಬರ್ 2025, 21:31 IST
ದಾವಣಗೆರೆಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ 
ದಾವಣಗೆರೆಯಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ    

ದಾವಣಗೆರೆ: ‘ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಿಯು ಕಾಲೇಜು ಆರಂಭಿಸುವ ಚಿಂತನೆ ಇದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶನಿವಾರ ತಿಳಿಸಿದರು. 

ಇಲ್ಲಿನ ಬಿಐಇಟಿ ಕಾಲೇಜು ಆವರಣದಲ್ಲಿ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ದಿಂದ ನಡೆದ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

‘ರಾಜ್ಯದಲ್ಲಿ 800 ಕೆಪಿಎಸ್ ಶಾಲೆ ಆರಂಭಿಸಲು ₹3,500 ಕೋಟಿ ಅನುದಾನ ನೀಡಲಾಗುತ್ತಿದೆ. 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 13 ಸಾವಿರ ಶಾಲೆಗಳು ರಾ‌ಜ್ಯದಲ್ಲಿವೆ’ ಎಂದು ತಿಳಿಸಿದರು.  

ADVERTISEMENT

‘ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಬದ್ಧ’ ಎಂದು ಭರವಸೆ ನೀಡಿದರು. 

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಕುಪ್ಮಾ ಅಧ್ಯಕ್ಷ ಎಂ.ಮೋಹನ್ ಆಳ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ಶ್ರೀಧರ್ ವೇದಿಕೆಯಲ್ಲಿದ್ದರು. 

ಎರಡು ದಿನಗಳ ಸಮಾವೇಶದಲ್ಲಿ ರಾಜ್ಯದ ವಿವಿಧ ಪಿಯು ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಸದಸ್ಯರು ಸೇರಿ ನೂರಾರು ಜನ ಭಾಗವಹಿಸಿದ್ದರು.

ಸಂಘಟನೆ ಬಲಪಡಿಸುವುದು, ಗುಣಮಟ್ಟದ ಶಿಕ್ಷಣ, ಖಾಸಗಿ ಕಾಲೇಜುಗಳ ಎದುರು ಇರುವ ಸವಾಲುಗಳು, ತಂತ್ರಜ್ಞಾನ ಮತ್ತು ಎಐ ಬಳಕೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.