ADVERTISEMENT

ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ

ಸುರಕ್ಷತೆಗೆ ಆದ್ಯತೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:54 IST
Last Updated 17 ಜೂನ್ 2020, 13:54 IST
ದ್ವಿತೀಯ ಪಿಯುಸಿ ಪರೀಕ್ಷೆ ಅಂಗವಾಗಿ ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಮುಂಜಾಗ್ರತೆಯಾಗಿ ಸೋಕು ನಿವಾರಕವನ್ನು ಸಿಂಪಡಿಸುತ್ತಿರುವುದು –ಪ್ರಜಾವಾಣಿ ಚಿತ್ರ
ದ್ವಿತೀಯ ಪಿಯುಸಿ ಪರೀಕ್ಷೆ ಅಂಗವಾಗಿ ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಮುಂಜಾಗ್ರತೆಯಾಗಿ ಸೋಕು ನಿವಾರಕವನ್ನು ಸಿಂಪಡಿಸುತ್ತಿರುವುದು –ಪ್ರಜಾವಾಣಿ ಚಿತ್ರ   

ದಾವಣಗೆರೆ: ದ್ವಿತೀಯ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆ ಜೂನ್‌ 18ರಂದು ನಡೆಯಲಿದ್ದು, ಜಿಲ್ಲೆಯಾದ್ಯಂತ 16,018 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 31 ಪರೀಕ್ಷಾ ಕೇಂದ್ರಗಳು ಇದ್ದು, ಹೆಚ್ಚುವರಿಯಾಗಿ 15 ಬ್ಲಾಕ್‌ಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಅಂತರ ಕಾಯ್ದುಕೊಳ್ಳಲು ಬಣ್ಣದಲ್ಲಿ ಗುರುತು ಮಾಡಲಾಗಿದೆ. ಸ್ವಚ್ಛತೆಗಾಗಿ ಸೋಪು ಹಾಗೂ ನೀರನ್ನು ಇಡಲಾಗಿದೆ. ವಿದ್ಯಾರ್ಥಿಗಳು ಹಾಗೂ ‍ಪೋಷಕರು ಬುಧವಾರ ಕಾಲೇಜುಗಳಿಗೆ ಬಂದು ಸಿದ್ಧತೆಯನ್ನು ಪರಿಶೀಲಿಸಿದರು.

ದಾವಣಗೆರೆ ನಗರದಲ್ಲಿ ಮೋತಿ ವೀರಪ್ಪ ಕಾಲೇಜು, ಎವಿಕೆ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿ 16 ಕೇಂದ್ರಗಳಲ್ಲಿ ಸಿದ್ಧತೆ ನಡೆದಿದೆ. ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಲ್ಲಿ 25 +1 ಕೊಠಡಿಗಳಲ್ಲಿ (ಒಂದು ಕೊಠಡಿ ಹೆಚ್ಚುವರಿ) ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 4 ಅಡಿ ಅಂತರಕ್ಕೆ ಬೆಂಚುಗಳನ್ನು ಅಳವಡಿಸಲಾಗಿದೆ.

ADVERTISEMENT

ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ 20 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಕಾಲೇಜಿನ ಸಿಬ್ಬಂದಿ ಬೆಳಿಗ್ಗೆ ಮಕ್ಕಳಿಗೆ ನೀರು ಹಾಗೂ ಸ್ಯಾನಿಟೈಸರ್ ಅನ್ನು ನೀಡುತ್ತಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡುತ್ತಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ವೀರಣ್ಣ ಚಳಗೇರಿ ತಿಳಿಸಿದರು.

ಹೈಸ್ಕೂಲ್ ಮೈದಾನದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 43 ಕೊಠಡಿಗಳಲ್ಲಿ (ಡಯಟ್ ಹಾಗೂ ಎಜಿಬಿ ಕಾಲೇಜುಗಳಿಂದ ಹೆಚ್ಚುವರಿ ಕೊಠಡಿಗಳನ್ನು ಪಡೆಯಲಿದೆ) 980 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕಂಟೈನ್‌ಮೆಂಟ್ ವಲಯದಿಂದ ಮೂವರು ವಿದ್ಯಾರ್ಥಿಗಳು ಇದ್ದು, ಅವರಿಗೆ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ ಎನ್ನುತ್ತಾರೆ ಪರೀಕ್ಷಾ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನಪ್ಪ.

‘ವಿದ್ಯಾರ್ಥಿಗಳು ಪರೀಕ್ಷೆಗೆ ಬೆಳಿಗ್ಗೆ 10.15ರಿಂದ 1.30ವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 8.30 ಹಾಜರಾಗಬೇಕು. ಕೋವಿಡ್–19 ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಕೈತೊಳೆಯಲು ನೀರು, ಸೋಪು, ಸ್ಯಾನಿಟೈಸರ್ ಇಡಲಾಗುವುದು. ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಸಾಲು ಸಾಲಾಗಿ ಕಳುಹಿಸುತ್ತೇವೆ’ ಎನ್ನುತ್ತಾರೆ ಡಿಡಿಪಿಯು ಆರ್.ನಾಗರಾಜಪ್ಪ.

‘ವಿದ್ಯಾರ್ಥಿಗಳು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಆರೋಗ್ಯ ಸಹಾಯಕರು ಥರ್ಮಲ್ ಸ್ಕ್ರೀನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಒಳಬಿಡುತ್ತಾರೆ. ಹೆಚ್ಚು ಉಷ್ಣಾಂಶ ಇರುವ ವಿದ್ಯಾರ್ಥಿಗಳನ್ನು ಬೇರೆ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು’ ಎನ್ನುತ್ತಾರೆ.

ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ ಮುಚ್ಚಲು ಕ್ರಮ

ದಾವಣಗೆರೆ: ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲಾ 31 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷಾ ಅವಧಿಯಲ್ಲಿ 200 ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಜೆರಾಕ್ಸ್, ಸೈಬರ್ ಕೆಫೆ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪರೀಕ್ಷೆ ಸುಗಮವಾಗಿ ನಡೆಯಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆಯದಂತೆ ತಡೆಗಟ್ಟುವ ಸಲುವಾಗಿ ಹಾಗೂ ಪರೀಕ್ಷೆಗಳು ವ್ಯವಸ್ಥಿತವಾಗಿ ಮತ್ತು ದೋಷರಹಿತವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧ ಹೇರಲಾಗಿದೆ.

‘ಈ ಆದೇಶವು ಪರಿಕ್ಷಾರ್ಥಿಗಳಿಗೆ ಹಾಗೂ ಸದರಿ ಪರೀಕ್ಷೆಯ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನ್ವಯಿಸುವುದಿಲ್ಲ. ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು, ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.