ADVERTISEMENT

ಮರಣದ ನಂತರವೂ ಜೀವಿಸಿರುವ ಪುನೀತ್‌: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 2:28 IST
Last Updated 27 ಡಿಸೆಂಬರ್ 2021, 2:28 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನುಡಿನಮನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಯಿತು
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನುಡಿನಮನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಯಿತು   

ದಾವಣಗೆರೆ: ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್‌ ರಾಜ್‌ಕುಮಾರ್‌ಅವರದ್ದಾಗಿತ್ತು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಕುಂಬಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನುಡಿನಮನ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ. ಹೇಗೆ ಬದುಕಿದ್ದರು ಎಂಬುದೇ ಮುಖ್ಯ. ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ. ಕೇವಲ 46 ವರ್ಷ ಬದುಕಿದರೂ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ’ ಎಂದು ಬಂದರು.

ADVERTISEMENT

ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ‘ಪುನೀತ್ ರಾಜಕುಮಾರ್ ಅದ್ಭುತ ನಟ. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಅಭಿಮಾನದ ವಿದಾಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಹೇಳಿದರು.

ಪುನೀತ್ ಸಮಾಜ ಸೇವೆಯಲ್ಲೂ ತೊಡಗಿದ್ದರು. ಅವರ ಅಭಿಮಾನಿಗಳು ಅವರಂತೆ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು.

ಸ್ವಯಂಪ್ರೇರಿತ ರಕ್ತದಾನ, ನೇತ್ರದಾನಕ್ಕೆ ನೋಂದಣಿ ಜರುಗಿತು. ‘ಅಪ್ಪು’ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಚಿತ್ರದುರ್ಗ ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲಾವೇದಿಕೆ ರಾಜ್ಯಾಧ್ಯಕ್ಷ ಕೆ.ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಬಿ.ದಿಳ್ಳೆಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಡಾ.ಡಿ.ಎಸ್.ಜಯಂತ್, ಜಿಲ್ಲಾ ಹಿಂದುಳಿದ ಕುಂಬಾರ ಸಂಘದ ಅಧ್ಯಕ್ಷ ಕೆ.ಎನ್. ಬಸವರಾಜ್, ಕೆ.ಎಸ್. ಜಯಪ್ಪ, ಕೆ.ಎನ್. ವೆಂಕಟೇಶ, ಹಿರಿಯಮ್ಮ ಮಂಜಪ್ಪ, ನಾಗಮ್ಮ, ಪಾದಯಾತ್ರೆ ಮಾಡಿದ್ದ ದ್ರಾಕ್ಷಾಯಣಮ್ಮ, ಸೈಕಲ್‌ ಜಾಥಾ ಮಾಡಿದ್ದ ಅರಸಿಕೆರೆ ಉಮಾಪತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.