ADVERTISEMENT

ರಾಮಲಿಂಗೇಶ್ವರ ಮಠ: ಸಾಮಾಜಿಕ, ಅಧ್ಯಾತ್ಮಿಕ, ಶೈಕ್ಷಣಿಕ ಅಭಿವೃದ್ಧಿ ಸಾಕಾರ

ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ

ಎನ್‌.ವಿ ರಮೇಶ್‌
Published 27 ಫೆಬ್ರುವರಿ 2025, 4:54 IST
Last Updated 27 ಫೆಬ್ರುವರಿ 2025, 4:54 IST
<div class="paragraphs"><p>ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದಲ್ಲಿರುವ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಸಿಬ್ಬಂದಿ</p></div>

ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದಲ್ಲಿರುವ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಸಿಬ್ಬಂದಿ

   

ಬಸವಾಪಟ್ಟಣ: ಬಾಲ್ಯದಿಂದಲೇ ಅಧ್ಯಾತ್ಮಿಕ ಅನುಭವಗಳನ್ನು ಪಡೆಯುತ್ತಾ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಲಿಂಗೇಶ್ವರ ಸ್ವಾಮೀಜಿ ಅವರು ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ.

ಪುಟ್ಟಗ್ರಾಮ ಕೆಂಗಾಪುರದ ಬಡಕುಟುಂಬದಲ್ಲಿ ಹುಟ್ಟಿದ ರಾಮಪ್ಪ (ಮೂಲ ಹೆಸರು) ಅವರು ಇಲ್ಲಿಗೆ ಸಮೀಪದ ಹರನಹಳ್ಳಿಯಲ್ಲಿ ಶತಮಾನದ ಹಿಂದೆ ಜೀವಿಸಿದ್ದ ಬ್ರಹ್ಮಲಿಂಗೇಶ್ವರ ಶ್ರೀಗಳ ಪ್ರೇರಣೆ ಪಡೆದು ರಾಮಲಿಂಗೇಶ್ವರ ಶ್ರೀ ಎಂದು ಹೆಸರಾದರು. 50 ವರ್ಷಗಳ ಹಿಂದೆ ಕೆಂಗಾಪುರದಲ್ಲಿ ರಾಮಲಿಂಗೇಶ್ವರ ಮಠವನ್ನು ಸ್ಥಾಪಿಸಿದರು. ವಿದ್ಯೆಯಿಂದಲೇ ಜನಕಲ್ಯಾಣ ಎಂಬುದನ್ನು ಅರಿತ ಅವರು ಹರನಹಳ್ಳಿಯಲ್ಲಿ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಕೆಂಗಾಪುರ ಹಾಗೂ ಸುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. 

ADVERTISEMENT

ಶಿಕ್ಷಣ ಕ್ರಾಂತಿ

ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಎಲ್‌.ಕೆ.ಜಿ.ಯಿಂದ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿವೆ. ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳ ಆಯ್ಕೆ ಇವೆ. ಉರ್ದು ಮಾಧ್ಯಮದಲ್ಲೂ ಕಲಿಯಲು ಅವಕಾಶವಿದೆ. ವೃತ್ತಿಪರ ಶಿಕ್ಷಣ ಒದಗಿಸುವ ಐ.ಟಿ.ಐ. ಮತ್ತು ಬಿ.ಇಡಿ ತರಗತಿಗಳು ನಡೆಯುತ್ತಿವೆ. ಇದಲ್ಲದೇ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಮತ್ತು ಭದ್ರಾವತಿ ತಾಲ್ಲೂಕಿನ ನಿಂಬೆಗೊಂದಿಗಳಲ್ಲೂ ಪ್ರೌಢಶಾಲೆಗಳನ್ನು ಸ್ವಾಮೀಜಿ ತೆರೆದಿದ್ದಾರೆ.

‘ವಿದ್ಯಾಸಂಸ್ಥೆಯಲ್ಲಿ 1,500 ವಿದ್ಯಾರ್ಥಿಗಳು, 75 ಉಪನ್ಯಾಸಕ ಸಿಬ್ಬಂದಿ ಇದ್ದು, ಹರನಹಳ್ಳಿಯಲ್ಲಿ ವಸತಿಯುತ ಉಚಿತ ವಿದ್ಯಾರ್ಥಿ ನಿಲಯದಲ್ಲಿ 600ಕ್ಕೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಬಡವರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಹೆಚ್ಚಾಗಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡಲಾಗುತ್ತಿದೆ’ ಎಂದು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್‌.ಆರ್‌.ವಿಜಯಕುಮಾರ್‌ ತಿಳಿಸಿದ್ದಾರೆ. 

ಎರಡು ಪ್ರೌಢಶಾಲೆಗಳನ್ನು ಹೊರತುಪಡಿಸಿದರೆ ಬೇರಾವ ಶಾಲಾ, ಕಾಲೇಜುಗಳಿಗೂ ಸರ್ಕಾರದ ಅನುದಾನವಿಲ್ಲ. ಆದರೂ ಸ್ವಾಮೀಜಿ ಶೈಕ್ಷಣಿಕ ಸೇವೆಯ ದೃಷ್ಟಿಯಿಂದ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಕೆ.ಪಿ. ಓಂಕಾರನಾಯ್ಕ ತಿಳಿಸಿದ್ದಾರೆ.

ಉಚಿತ ಸಾಮೂಹಿಕ ವಿವಾಹ

ಹರನಹಳ್ಳಿ ಮಠದಲ್ಲಿ ಪ್ರತಿವರ್ಷ ಶಿವರಾತ್ರಿ ಮರುದಿನ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ವಿದ್ವಾಂಸರು ಮತ್ತು ಜನಪ್ರತಿನಿಧಿಗಳು ಸಾಕ್ಷಿಯಾಗುತ್ತಾರೆ. ಯಾವ ಖರ್ಚಿಲ್ಲದೇ ಉಚಿತವಾಗಿ ನಡೆಸುವ ವಿವಾಹದಿಂದ ಬಡ ಕುಟುಂಬಗಳು ನೆಮ್ಮದಿ ಕಾಣುತ್ತಿವೆ. ಸ್ವಾಮೀಜಿಯವರು ವಧುವಿಗೆ ಮಾಂಗಲ್ಯ, ವಧೂ–ವರರಿಗೆ ಬಟ್ಟೆಯನ್ನು ನೀಡಿ ಆಶೀರ್ವದಿಸುತ್ತಾರೆ. ಈವರೆಗೆ ಮಠದಲ್ಲಿ ಸಾವಿರಾರು ಉಚಿತ ವಿವಾಹಗಳು ನಡೆದಿವೆ. ರಾಮಲಿಂಗೇಶ್ವರಸ್ವಾಮಿ ಮಠಕ್ಕೆ ಬರುವ ಭಕ್ತರಿಗೆ ವರ್ಷದ 365 ದಿನವೂ ಅನ್ನ ಸಂತರ್ಪಣೆ ನಡೆಯುತ್ತದೆ ಎಂದು ಮಠದ ಭಕ್ತ, ಕಂಸಾಗರದ ವೀರಭದ್ರಪ್ಪ ಹೇಳಿದ್ದಾರೆ. 

ಪ್ರಗತಿಪರ ಚಿಂತನೆಗೆ ಅಡಿಪಾಯ

ರಾಮಲಿಂಗೇಶ್ವರ ಸ್ವಾಮೀಜಿಯವರು ಮೂಢ ನಂಬಿಕೆಗಳನ್ನು ಖಂಡಿಸಿ, ಪ್ರತಿವರ್ಷ ನಾಗರ ಪಂಚಮಿಯಂದು ಕಲ್ಲಿನ ನಾಗರಕ್ಕೆ ಹಾಲೆರೆಯುವ ಪದ್ಧತಿಯನ್ನು ದೂರ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ಕುಡಿಸುತ್ತಾ ಪ್ರಗತಿಪರ ಚಿಂತನೆಗೆ ಅಡಿಪಾಯ ಹಾಕಿದ್ದಾರೆ. ಯುವ ಜನತೆಗೆ ಮಂತ್ರೋಪದೇಶದೊಂದಿಗೆ ಬ್ರಹ್ಮಮಾಲೆ ನೀಡಿ ಧ್ಯಾನ ಮಾಡುವ ಪದ್ಧತಿಯನ್ನು ಬೆಳೆಸಿದ್ದಾರೆ ಎಂದು ಕೆಂಗಾಪುರದ ಶಂಕರಾನಾಯ್ಕ ತಿಳಿಸಿದ್ದಾರೆ. 

ಮುಳ್ಳುಗದ್ದುಗೆ ಉತ್ಸವ ಇಂದು

ಮಠದಲ್ಲಿ ಒಂದು ವಾರದಿಂದ ಶಿವರಾತ್ರಿ ಉತ್ಸವ ನಡೆಯುತ್ತಿದ್ದು, ಫೆಬ್ರುವರಿ 27 ರಂದು ಬೆಳಿಗ್ಗೆ 6ರಿಂದ ನಡೆಯುವ ರಾಮಲಿಂಗೇಶ್ವರ ಸ್ವಾಮೀಜಿಯವರ ಮುಳ್ಳುಗದ್ದುಗೆ ಉತ್ಸವವನ್ನು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಉದ್ಘಾಟಿಸಲಿದ್ದಾರೆ. ನಂತರ ನಡೆಯುವ ಧರ್ಮಸಭೆಯಲ್ಲಿ ವಿವಿಧ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ. ಹಲವು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉಚಿತ ಸಾಮೂಹಿಕ ವಿವಾಹ ಮತ್ತು ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಪ್ರತಿ ವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹಗಳು
ರಾಮಲಿಂಗೇಶ್ವರ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.