
ದಾವಣಗೆರೆ: ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರಲ್ಲಿದ್ದ ಛಲ, ಆತ್ಮವಿಶ್ವಾಸ, ನಾಡು–ನುಡಿಯ ಮೇಲಿನ ಅಭಿಮಾನ ಅನುಕರಣೀಯ. ಯುವಸಮೂಹ ಚನ್ನಮ್ಮ ಆದರ್ಶ ಮಹಿಳೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರದಲ್ಲಿ ಗುರುವಾರ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶ ಅನ್ಯರ ಪಾಲಾಗದಂತೆ ಎಚ್ಚರವಹಿಸಿದವರು ಚನ್ನಮ್ಮ. ನಾಡಿನ ಉಳಿವಿಗಾಗಿ ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದರು. ದೇಶದ ವಿಮೋಚನೆಗಾಗಿ ಯುದ್ಧ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.
‘ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಜೀವಿಸುತ್ತಿರುವುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಮಹನೀಯರು ನಡೆಸಿದ ಹೋರಾಟವೇ ಕಾರಣ. ದಕ್ಷ ಆಡಳಿತಗಾರರೂ ಆಗಿದ್ದ ಚನ್ನಮ್ಮ, ಬ್ರಿಟಿಷ ವಿರುದ್ಧ ನಡೆಸಿದ ಹೋರಾಟ ರೋಚಕ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಎಂದಿಗೂ ಮರೆಯಬಾರದು’ ಎಂದರು.
‘ಸ್ತ್ರೀಯರಿಗೆ ಅಗಾಧ ಶಕ್ತಿ ಇದೆ. ಚನ್ನಮ್ಮ ಅವರಂತಹ ಮಹಿಳೆ ಪ್ರತಿ ಮನೆಯಲ್ಲಿ ಜನಿಸಬೇಕು. ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆಯುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ದೇಶದ ಒಳಗೆ ಶತ್ರುಗಳಿಲ್ಲ. ಆದರೆ, ಹೊರಗೆ ಶತ್ರುಗಳು ಸೃಷ್ಟಿಯಾಗಿದ್ದಾರೆ. ದೇಶಕ್ಕೆ ಆಪತ್ತು ಎದುರಾದರೆ ಎಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು. ಯೋಧರಾಗಿ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು’ ಎಂದರು.
ಜಯಂತಿ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಿತ್ತೂರು ರಾಣಿ ಚನ್ನಮ್ಮನ ಕುರಿತ ನೃತ್ಯ ರೂಪಕ ಪ್ರದರ್ಶಿಸಲಾಯಿತು.
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ರಾಜ್ಯ ವೀರಶೈವ ಲಿಂಗಾಯುತ ಪಂಚಮಸಾಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಹಾಜರಿದ್ದರು.
ಗಮನ ಸೆಳೆದ ಬೈಕ್ ರ‍್ಯಾಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ಅಂಗವಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ವತಿಯಿಂದ ನಗರದಲ್ಲಿ ಗುರುವಾರ ನಡೆಸಿದ ಬೈಕ್ ರ‍್ಯಾಲಿ ಗಮನ ಸೆಳೆಯಿತು. ಶಿವಯೋಗಿ ಮಂದಿರದ ಬಳಿ ರೈತ ಮುಖಂಡ ತೇಜಸ್ವಿ ಪಟೇಲ್ ರ‍್ಯಾಲಿಗೆ ಚಾಲನೆ ನೀಡಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾಜಿ ಮೇಯರ್ ಬಿ.ಜೆ. ಅಜಯ್‌ಕುಮಾರ್ ಹಾಗೂ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಬಿ. ಗಂಗಾಧರ ದ್ವಿಚಕ್ರ ವಾಹನ ಚಾಲನೆ ಮಾಡಿ ರ‍್ಯಾಲಿಗೆ ಹುರುಪು ತುಂಬಿದರು. ನಿಟುವಳ್ಳಿ ಬಂಬೂಬಜಾರ್ ಹೊಂಡದ ವೃತ್ತ ಆರ್‌ಟಿಒ ಕಚೇರಿ ಸಂಗೊಳ್ಳಿ ರಾಯಣ್ಣ ವೃತ್ತ ಪಿ.ಬಿ.ರಸ್ತೆ ವಿನೋಬನಗರ ಎಂಸಿಸಿ ಬಡಾವಣೆ ಮೂಲಕ ಕುವೆಂಪು ಕನ್ನಡ ಭವನ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.