ADVERTISEMENT

ಸಿಹಿ ನೀಡಿದ ‘ರತ್ನಗಿರಿ ಆಪೂಸ್‌’ ಕೃಷಿ

3 ಎಕರೆಯಲ್ಲಿ 200 ಗಿಡಗಳನ್ನು ಬೆಳೆಸಿದ ಮಹ್ಮದ್‌ ಅಲಿ

ಎನ್.ವಿ.ರಮೇಶ್
Published 8 ಫೆಬ್ರುವರಿ 2023, 6:01 IST
Last Updated 8 ಫೆಬ್ರುವರಿ 2023, 6:01 IST
ಬಸವಾಪಟ್ಟಣದ ತಮ್ಮ ಮಾವಿನ ತೋಟದಲ್ಲಿ ಬೆಳೆಸಿರುವ ಫಲ ಭರಿತ ಮಾವಿನ ಮರದೊಂದಿಗೆ ರೈತ ಮಹ್ಮದ್ಅಲಿ
ಬಸವಾಪಟ್ಟಣದ ತಮ್ಮ ಮಾವಿನ ತೋಟದಲ್ಲಿ ಬೆಳೆಸಿರುವ ಫಲ ಭರಿತ ಮಾವಿನ ಮರದೊಂದಿಗೆ ರೈತ ಮಹ್ಮದ್ಅಲಿ   

ಬಸವಾಪಟ್ಟಣ: ಇಲ್ಲಿನ ಯುವ ರೈತ ಮಹ್ಮದ್‌ ಅಲಿ ತಮ್ಮ 3 ಎಕರೆ ಜಮೀನಿನಲ್ಲಿ ಮಾವಿನ ಸಸಿ ಬೆಳೆಸಿದ್ದು ಪ್ರತಿ ವರ್ಷ ಉತ್ತಮ ಲಾಭ ಪಡೆಯುತ್ತಿದ್ದಾರೆ.

‘ಇಲ್ಲಿನ ಮಣ್ಣು ಮತ್ತು ವಾಯುಗುಣ ಮಾವಿನ ಫಸಲಿಗೆ ಸೂಕ್ತವಾಗಿದೆ. 10 ವರ್ಷಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ಆಪೂಸ್‌ ತಳಿಯ 200 ಮಾವಿನ ಸಸಿಗಳನ್ನು ತರಿಸಿ ನಮ್ಮ ಜಮೀನಿನಲ್ಲಿ ಬೆಳೆಸಿದೆವು. ಪ್ರತಿ ಗಿಡಕ್ಕೆ 20 ಅಡಿ ಅಂತರವಿದ್ದು
ಸುಮಾರು 200 ಗಿಡಗಳನ್ನು ಹಾಕಿದ್ದೇವೆ.

ಸಸಿಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಹೊಸ ಮಣ್ಣು ಹಾಕುವುದನ್ನು ಬಿಟ್ಟರೆ ಬೇರೆ ಗೊಬ್ಬರ ಬಳಸಿಲ್ಲ. ಗಿಡಗಳನ್ನು ನೆಟ್ಟ ಎರಡು ವರ್ಷಗಳಿಗೆ ಹೂ ಅರಳಿದ್ದವು. ಕೃಷಿ ತಜ್ಞರ ಸಲಹೆಯಂತೆ ಮೊದಲ ವರ್ಷದ ಹೂಗಳನ್ನು ಕಾಯಿಯಾಗಲು ಬಿಡದೇ ಚಿವುಟಿ ಹಾಕಿದ್ದರಿಂದ ಗಿಡಗಳಲ್ಲಿ ಕವಲುಗಳು ಹೆಚ್ಚಾಗಿ ಗುಂಪು ಗುಂಪಾಗಿ ರೆಂಬೆಗಳು ಬೆಳೆದವು. ಮೂರನೇ ವರ್ಷದಿಂದ ಉತ್ತಮವಾದ ಫಸಲು ದೊರೆಯತೊಡಗಿತು’ ಎಂದು ಅವರು ತಿಳಿಸಿದರು.

ADVERTISEMENT

‘ಕೆಲವು ವೇಳೆ ಹವಾಮಾನ ವೈಪರೀತ್ಯದಿಂದ ದಟ್ಟವಾದ ಮಂಜು ಬಿದ್ದರೆ ಮಾವಿನ ಹೂಗಳು ಕೆಳಗೆ ಸುರಿಯುವುದುಂಟು. ಅಂತಹ ಸಂದರ್ಭದಲ್ಲಿ ಫಸಲು ಕಡಿಮೆಯಾಗುತ್ತದೆ. ಇದಕ್ಕಾಗಿ ಯಾವ ಔಷಧದ ಪರಿಹಾರವಿಲ್ಲ. ಪ್ರತಿ ಗಿಡ ವರ್ಷಕ್ಕೆ ಸರಾಸರಿ ಒಂದು ಕ್ವಿಂಟಲ್‌ ಮಾಗಿದ ಕಾಯಿಗಳನ್ನು ಬಿಡುತ್ತಿವೆ. ಸಾಮಾನ್ಯವಾಗಿ ಮಾರ್ಚ್‌ ಕೊನೆಯ ವಾರದಿಂದ ಮಾವಿನ ಫಸಲಿನ
ಕೊಯ್ಲು ಆರಂಭವಾಗುತ್ತದೆ. ಗಿಡದಲ್ಲಿಯೇ ಹಣ್ಣಾಗಿರುವ ಮಾವಿನಹಣ್ಣುಗಳು ಕೆಡದಂತೆ ತುಂಬಿ ಸಾಗಿಸಲು ಮಾರುಕಟ್ಟೆಗಳಲ್ಲಿ ದೊರೆಯುವ ರಟ್ಟಿನ ಪೆಟ್ಟಿಗೆಗಳಲ್ಲಿ ತಲಾ 24ರಂತೆ ಭರ್ತಿ ಮಾಡಿ ಪುಣೆ ಮತ್ತು ಸಾಂಗ್ಲಿ ನಗರಗಳಿಗೆ ಸ್ವತಃ ತೆಗೆದುಕೊಂಡು ಹೋಗಿ ಮಾರುತ್ತೇವೆ. ಸ್ಥಳೀಯ ವ್ಯಾಪಾರಿಗಳೂ ನಮ್ಮಲ್ಲಿಗೆ ಬಂದು ಖರೀದಿಸುತ್ತಾರೆ. ಈ ರತ್ನಗಿರಿ ಆಪೂಸ್‌ ಮಾವಿನ ಹಣ್ಣಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಅಚ್ಚ ಹಳದಿ ಬಣ್ಣದ ಉತ್ತಮ ಗಾತ್ರದ ಹಣ್ಣುಗಳು ಜನರನ್ನು ಆಕರ್ಷಿಸುತ್ತವೆ. ಆದ್ದರಿಂದ ಇವುಗಳಿಗೆ ಉತ್ತಮ ಬೆಲೆ ಇದೆ’ ಎಂದು ಅವರು ವಿವರಿಸಿದರು.

‘ಪ್ರತಿ ಕೆ.ಜಿ ಮಾವಿನ ಹಣ್ಣಿಗೆ ₹ 60 ರಿಂದ ₹ 100ರವರೆಗೆ ಬೆಲೆ ದೊರೆಯುತ್ತದೆ. ಹಣ್ಣುಗಳನ್ನು ತುಂಬುವ ರಟ್ಟಿನ ಪೆಟ್ಟಿಗೆ ಖರೀದಿ, ಕೊಯ್ಲು ಮಾಡಿದ ಕೂಲಿ, ಸಾಗಣೆ ವೆಚ್ಚ ಸೇರಿ ಕೆ.ಜಿ.ಗೆ 25 ವೆಚ್ಚವಿದೆ. ಈ ಮಾವಿನ ಫಸಲು ರೈತನಿಗೆ ಎಂದೂ ನಷ್ಟ ಉಂಟು ಮಾಡುವುದಿಲ್ಲ’ ಎನ್ನುತ್ತಾರೆ ಮಹ್ಮದ್‌ ಅಲಿ.

‘ಗುಡ್ಡದ ಬದಿಯಲ್ಲಿರುವ ನಮ್ಮ ಈ ತೋಟ ಗ್ರಾಮದಿಂದ 1 ಕಿ.ಮೀ. ದೂರವಿದೆ. ಆದ್ದರಿಂದ ತೋಟದಲ್ಲಿಯೇ ಸುಭದ್ರ ಮನೆಯನ್ನು ನಿರ್ಮಿಸಿಕೊಂಡು ವಾಸವಾಗಿದ್ದೇವೆ. ಇದರೊಂದಿಗೆ ವರ್ಷವಿಡೀ ತರಕಾರಿಗಳನ್ನೂ ಬೆಳೆಯುತ್ತಿದ್ದೇವೆ. ಹಸು–ಎಮ್ಮೆಗಳನ್ನೂ ಸಾಕುತ್ತಿದ್ದೇವೆ. ಇದರಿಂದ ಹಾಲು ಉತ್ಪಾದನೆಯೊಂದಿಗೆ ಮಾವಿನ ಫಸಲಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ದೊರೆಯುತ್ತಿದೆ’ ಎನ್ನುತ್ತಾರೆ ಮಹ್ಮದ್‌ ಅಲಿ ಅವರ ಅಣ್ಣ ಅನ್ಸರ್‌ ಅಲಿ ಸಾಹೇಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.