
ದಾವಣಗೆರೆ: ‘ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಏನನ್ನಾದರೂ ಸಾಧಿಸುವಷ್ಟು ಜ್ಞಾನ ದೊರೆಯುತ್ತದೆ. ಪೋಷಕರು ಮನೆಗಳಲ್ಲಿ ಟಿ.ವಿ ಹಾಗೂ ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. ಶಾಲೆಗಳಲ್ಲೂ ಶಿಕ್ಷಕರು ವಿದ್ಯಾರ್ಥಿಗಳ ಬಳಿ ಮೊಬೈಲ್ ಬಳಸುವುದನ್ನು ತಗ್ಗಿಸಬೇಕು. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು’ ಎಂದು ಮಕ್ಕಳ ತಜ್ಞ ಡಾ.ಜಿ. ಗುರುಪ್ರಸಾದ್ ಹೇಳಿದರು.
ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಬುಧವಾರ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಪುಸ್ತಕ ಪಂಚಮಿ’ಯ 16ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಜಪಾನ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಅಂಕ ಗಳಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಬೇಸರಿಸಿದರು.
‘ಪುಸ್ತಕ ಓದುವುದರಿಂದ, ಉತ್ತಮ ಸ್ನೇಹಿತರನ್ನು ಹೊಂದುವುದರಿಂದ ಮತ್ತು ಚಿಂತಕರೊಡನೆ ಚರ್ಚೆ ನಡೆಸುವುದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು’ ಎಂದು ದಾವಣಗೆರೆ ಉತ್ತರ ವಲಯದ ಬಿಇಒ ಎಚ್.ಆರ್. ವಿಶಾಲಾಕ್ಷಿ ಹೇಳಿದರು.
‘ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿದ್ದಾರೆ. ಮೊಬೈಲ್ ಅನ್ನು ಮಿತವಾಗಿ ಬಳಸಿದರೆ ನಿಮಗೆ ಅನುಕೂಲವಾಗುತ್ತದೆ ಇಲ್ಲವಾದರೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ’ ಎಂದು ಹೇಳಿದರು.
‘ಈಚೆಗೆ ಕೆಲವು ಶಿಕ್ಷಕರು ಓದುವ ಹವ್ಯಾಸದಿಂದ ದೂರ ಉಳಿಯುತ್ತಿರುವುದು ಸರಿಯಲ್ಲ. ನಾವು ಎಲ್ಲಿಯವರೆಗೆ ಪುಸ್ತಕವನ್ನು ಜ್ಞಾನದ ಆಗರವೆಂದು ಭಾವಿಸುವುದಿಲ್ಲವೋ, ಅಲ್ಲಿಯವರೆಗೆ ನಾವು ಜ್ಞಾನ ಸಂಪಾದಿಸಲು ಆಗುವುದಿಲ್ಲ’ ಎಂದರು.
ಮಕ್ಕಳ ತಜ್ಞ ಸಿ.ಆರ್. ಬಾಣಾಪುರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ಮಾವ ಕಟ್ಟೀಮನಿಯವರು ಯಾವುದೇ ಗ್ರಾಮಕ್ಕೆ ಭೇಟಿ ನೀಡಿದರೂ, ಅಲ್ಲೊಂದು ಮನೆ ಹುಡುಕಿ, ಸಣ್ಣ ಶಾಲೆಯನ್ನು ತೆರೆದು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದರು. ಅವರ ಸ್ಮರಣಾರ್ಥ ಪುಸ್ತಕ ಪಂಚಮಿ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 101 ವಿದ್ಯಾರ್ಥಿಗಳಿಗೆ ತಲಾ ₹ 600 ಮೌಲ್ಯದ ಪುಸ್ತಕ, ಲೇಖನ ಸಾಮಗ್ರಿಗಳನ್ನು ಪ್ರತಿಷ್ಠಾನದಿಂದ ವಿತರಿಸಲಾಯಿತು.
ಈಶ್ವರಮ್ಮ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಉಷಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಎಸ್.ಪ್ರಭುಕುಮಾರ್, ಉಪಪ್ರಾಚಾರ್ಯರಾದ ಶಶಿರೇಖಾ, ಪ್ರತಿಷ್ಠಾನದ ಸಂಚಾಲಕ ಪ್ರಕಾಶ ಬೂಸ್ನೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.