ADVERTISEMENT

ಗ್ರಾ.ಪಂ. ಆಡಳಿತದಲ್ಲಿ ರೇಣುಕಾಚಾರ್ಯ ಹಸ್ತಕ್ಷೇಪ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 12:38 IST
Last Updated 11 ಫೆಬ್ರುವರಿ 2020, 12:38 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ‘ಹೊನ್ನಾಳಿ ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ‌ ಆಡಳಿತದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಅಧ್ಯಕ್ಷೆ ಲಕ್ಷ್ಮಮ್ಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ‌ಗೆ ಕಾನೂನಿನ ಪ್ರಕಾರ ಪಿಡಿಒ ಆಗಿ ವಿಜಯ್ ಗೌಡರ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ಶಾಸಕರು ಇವರಿಗೆ ಕರ್ತವ್ಯ ನಿರ್ವಹಿಸಲು ಬಿಡದೇ, ಭ್ರಷ್ಟಾಚಾರದಿಂದಾಗಿ ಅಮಾನತು ಆಗಿರುವ ಪಿಡಿಒ ಜಯಕುಮಾರ್ ಅವರಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು ಪಿಡಿಒಗಳು ಇದ್ದಾರೆ. 15 ದಿನಗಳಿಂದ ರಜೆಯಲ್ಲಿರುವ ಜಯಕುಮಾರ್ ಕರ್ತವ್ಯಕ್ಕೆ ಹಾಜರಾಗಿರುವ ವಿಜಯ್ ಗೌಡರ್ ಅವರಿಗೆ ಅಧಿಕಾರ ಹಸ್ತಾಂತರಿಸಿಲ್ಲ. ಇದರ ವಿರುದ್ಧ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ’ ಎಂದು ಬೇಸರವ್ಯಕ್ತಪಡಿಸಿದರು.

‘2015ರಲ್ಲಿ ಚುನಾವಣೆಯಲ್ಲಿ ಗೆದ್ದು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಆದೆ. ಭ್ರಷ್ಟಾಚಾರಲ್ಲಿ ಪಾಲ್ಗೊಳ್ಳದ ಕಾರಣ 18 ಸದಸ್ಯರಲ್ಲಿ 12 ಮಂದಿ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷೆ ಸ್ಥಾನದಿಂದ ಕಳೆದ ನವೆಂಬರ್‌ನಲ್ಲಿ ಕೆಳಗಿಳಿಸಿದರು. ಕಾನೂನು ಬದ್ಧವಾಗಿ ಮತ್ತೆ ಜ. 21ರಂದು ಅಧ್ಯಕ್ಷೆಯಾಗಿದ್ದೇನೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರಭಾರ ಅಧ್ಯಕ್ಷರ ಮೂಲಕ ಆಡಳಿತ ನಡೆಸಲು ಮುಂದಾಗಿದ್ದ ಶಾಸಕರ ಸಹೋದರ ಶಿವಶಂಕರಯ್ಯ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಫೆ. 13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಗುರುಪಾದಯ್ಯ ಮಠದ್ ಅವರೊಂದಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ನಾನೂ ಸತ್ಯಗ್ರಹದಲ್ಲಿ ಪಾಲ್ಗೊಳ್ಳಲಿದ್ದೇನೆ’ ಎಂದು ತಿಳಿಸಿದರು.

ಕುಂದೂರು ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಪ್ರಸನ್ನಕುಮಾರ್ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.