ADVERTISEMENT

ಬಗರ್‌ಹುಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 13:43 IST
Last Updated 17 ಡಿಸೆಂಬರ್ 2018, 13:43 IST
ಚನ್ನಗಿರಿಯಲ್ಲಿ ತಾಲ್ಲೂಕು ರೈತ ಸಂಘದಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು
ಚನ್ನಗಿರಿಯಲ್ಲಿ ತಾಲ್ಲೂಕು ರೈತ ಸಂಘದಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ಚನ್ನಗಿರಿ: ಜಂಟಿ ಸರ್ವೆ ಮತ್ತು ಅರಣ್ಯಭೂಮಿ, ಬಗರ್‌ಹುಕುಂ ಸಾಗುವಳಿದಾರರ ಹಕ್ಕುಪತ್ರ ಪಹಣಿ ಮಾಡಲು ಹಾಗೂ ಜಿಪಿಎಸ್ ಆಗಿರುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಸಮಾಜ ಕಲ್ಯಾಣ ಇಲಾಖೆಯು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅರಣ್ಯಭೂಮಿ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ಕಾಯ್ದೆಯ ತಿಳಿವಳಿಕೆಯನ್ನು ನೀಡಿಲ್ಲ. ಅರಣ್ಯ ಅತಿಕ್ರಮಣ ಸಾಗುವಳಿದಾರರಿಗೆ 82 ವರ್ಷಗಳ ಹಳೆಯ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದು ಅವೈಜ್ಞಾನಿಕ. ಇದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ಗೋಮಾಳ, ಸೇಂದಿವನ, ಹುಲ್ಲುಬನ್ನಿ, ಖರಾಬು, ದರಕಾಸ್ತ ಹಾಗೂ ಇತರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರವನ್ನು ನೀಡಬೇಕು. 1992 ಹಾಗೂ 98ರಲ್ಲಿ ಅರ್ಜಿ ಹಾಕದೇ ಇರುವ ಬಗರ್ ಹುಕುಂ ಸಾಗುವಳಿ ರೈತರಿಗೆ ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ಮಾಡಿ ಅಂತಹ ರೈತರಿಗೂ ಹಕ್ಕುಪತ್ರ ಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

ರಾಷ್ಟ್ರೀಕೃತ, ಸಹಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ವಿನಾಕಾರಣ ರೈತರಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್. ರವಿಕುಮಾರ್, ಗೌರವಾಧ್ಯಕ್ಷ ಮಲ್ಲಿಗೆರೆ ಪ್ರಕಾಶ್, ಕಾರ್ಯದರ್ಶಿ ಉಮೇಶ್, ಶರಣಪ್ಪ, ಶರಣಮ್ಮ, ಮಂಜುನಾಥ್, ತಿಪ್ಪೇಶ್, ಓಂಕಾರಸ್ವಾಮಿ, ಸಿದ್ದಪ್ಪ, ಶಿವಣ್ಣ, ಅಣ್ಣಯ್ಯ, ವೆಂಕಟೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.