ADVERTISEMENT

ರೈಲು ನಿಲ್ದಾಣದಲ್ಲಿ ರಿಸರ್ವೇಷನ್ ಕೌಂಟರ್ ಆರಂಭ

ಜೂನ್‌ 1ರಿಂದ 100 ಜೋಡಿ ರೈಲು ಆರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:08 IST
Last Updated 22 ಮೇ 2020, 15:08 IST
ದಾವಣಗೆರೆ ನಿಲ್ದಾಣಕ್ಕೆ ಶುಕ್ರವಾರ ಬಂದ ಬೆಂಗಳೂರು–ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ರೈಲಿನಲ್ಲಿ ಪ್ರಯಾಣ ಆರಂಭಿಸಿದ ಪ್ರಯಾಣಿಕರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ನಿಲ್ದಾಣಕ್ಕೆ ಶುಕ್ರವಾರ ಬಂದ ಬೆಂಗಳೂರು–ಬೆಳಗಾವಿ ಎಕ್ಸ್‌ಪ್ರೆಸ್ ವಿಶೇಷ ರೈಲಿನಲ್ಲಿ ಪ್ರಯಾಣ ಆರಂಭಿಸಿದ ಪ್ರಯಾಣಿಕರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜೂನ್ 1ರಿಂದ ಆರಂಭವಾಗುವ 100 ಜೋಡಿ ರೈಲುಗಳಿಗೆ ದಾವಣಗೆರೆಯ ಸೇರಿ ಮೈಸೂರು, ಶಿವಮೊಗ್ಗ ಟೌನ್ ಮತ್ತು ಹಾಸನ ನಿಲ್ದಾಣಗಳ ರಿಸರ್ವೇಷನ್ ಕೌಂಟರ್‍ಗಳನ್ನು ಕಾಯ್ದಿರಿಸಿದ ಟಿಕೆಟ್ ಬುಕ್ಕಿಂಗ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

ರಿಸರ್ವೇಷನ್ ಕೌಂಟರ್‍ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯು ನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‍ಗಳನ್ನು ತೆರೆಯಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್‍ಗಳಲ್ಲಿ ಮೇ 25ರಿಂದ ಪಡೆಯಬಹುದು.

ರಾಜ್ಯದಲ್ಲಿ 2 ಜೋಡಿ ಅಂತರ್ ಜಿಲ್ಲಾ ರೈಲುಗಳು ಬೆಂಗಳೂರಿನಿಂದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ಎಕ್ಸ್‌ಪ್ರೆಸ್ ವಿಶೇಷ ರೈಲು ಮತ್ತು ಬೆಂಗಳೂರಿನಿಂದ ಮೈಸೂರಿಗೆ (ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ) ಎಕ್ಸ್‌ಪ್ರೆಸ್‌ ವಿಶೇಷ ರೈಲು ಪ್ರಾರಂಭಿಸಲಾಗಿದೆ.

ADVERTISEMENT

ಅಂತರ ಕಾಯ್ದುಕೊಳ್ಳುವುದು ಮತ್ತು ಇತರೆ ನಿಗದಿತ ಕೋವಿಡ್ -19 ಕ್ರಮ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕ್ಕಿಂಗ್‌ ಕಚೇರಿಗಳು ಸೇರಿ ರೈಲ್ವೆಯ ಆವರಣದಲ್ಲಿ ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಗ್ರಾಹಕರಲ್ಲಿ ರೈಲ್ವೆ ಇಲಾಖೆ ಕೋರಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆಗೆ ಬಂದ ರೈಲು
ದಾವಣಗೆರೆ:
ಬೆಂಗಳೂರು–ಬೆಳಗಾವಿ (ಗಾಡಿ ಸಂಖ್ಯೆ 06597) ಎಕ್ಸ್‌ಪ್ರೆಸ್ ವಿಶೇಷ ರೈಲು ಮಧ್ಯಾಹ್ನ 1.18ಕ್ಕೆ ದಾವಣಗೆರೆಗೆ ತಲುಪಿ, 1.20ಕ್ಕೆ ಹೊರಟಿತು.

ಮಾರ್ಚ್‌ 23ರಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಅಂತರ ಜಿಲ್ಲಾ ಸಂಚಾರದ ರೈಲು ತಲುಪುತ್ತಿದ್ದಂತೆಯೇ ಜನರು ಹರ್ಷಗೊಂಡರು. ಗೂಡ್ಸ್‌ ಇಲ್ಲವೇ ಸಿಬ್ಬಂದಿ ಕರೆದೊಯ್ಯುವ ರೈಲುಗಳನ್ನು ಹೊರತುಪಡಿಸಿದರೆ ಶುಕ್ರವಾರ ದಾವಣಗೆರೆ ನಿಲ್ದಾಣಕ್ಕೆ ಬಂದ ರೈಲು ವಿಶೇಷ ಎನಿಸಿತು.

ರೈಲಿನೊಳಗಡೆ ಇದ್ದ ಪ್ರಯಾಣಿಕರು ಮಾಸ್ಕ್ ಧರಿಸುವುದರ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ಒಂದು ಮಧ್ಯದ ಸೀಟು ಬಿಟ್ಟು ಅಕ್ಕಪಕ್ಕದ ಸೀಟುಗಳಲ್ಲಿ ಪ್ರಯಾಣ ಬೆಳೆಸಿದರು. ಕಡಿಮೆ ಸಂಖ್ಯೆಯ ಪ್ರಯಾಣಿಕರು ಇದ್ದುದರಿಂದ ಯಾವುದೇ ನೂಕು ನುಗ್ಗಲು ಆಗಲಿಲ್ಲ.

ಎರಡು ತಿಂಗಳ ನಂತರ ರೈಲು ಆರಂಭವಾಗುತ್ತಿದ್ದು, ಬುಕ್ಕಿಂಗ್ ಕಚೇರಿ ಸೇರಿ ರೈಲ್ವೆಯ ಆವರಣದಲ್ಲಿ ಸ್ವಚ್ಛಗೊಳಿಸಲಾಗುತ್ತಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಪ್ರಯಾಣಿಕರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುತ್ತಿದ್ದರು.

‘ರೈಲಿನಲ್ಲಿ 350 ಮಂದಿ ಇದ್ದು, ದಾವಣಗೆರೆಯಿಂದ 4ಕ್ಕೂ ಹೆಚ್ಚು ಮಂದಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು. ಅವರಿಗೆ ಡಿ–13 ಬೋಗಿಯಲ್ಲಿ ಸೀಟು ಕಾಯ್ದಿರಿಸಲಾಗಿತ್ತು. ಮೇ 31ರವರೆಗೆ ಬುಕ್ ಮಾಡಿದ್ದ ಎಲ್ಲಾ ಟಿಕೆಟ್‌ಗಳು ರದ್ದಾಗಲಿವೆ ಎಂದು ನಿಲ್ದಾಣದ ವ್ಯವಸ್ಥಾಪಕ ಎಂ.ಎಸ್.ಶರ್ಮ.

‘ಜೂನ್‌ ತಿಂಗಳಲ್ಲಿ ಜನಶತಾಬ್ದಿ ಹಾಗೂ ಯಶವಂತಪುರ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳು ಆರಂಭವಾಗುವ ನಿರೀಕ್ಷೆ ಇದ್ದು, ರಿಸರ್ವೇಸನ್ ಆರಂಭವಾಗಿದೆ. ಕೌಂಟರ್‌ನಲ್ಲಿ ಮೂರರಿಂದ ನಾಲ್ಕು ಜನರು ಅಂತರ ಕಾಯ್ದುಕೊಂಡು ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿದೆ. ಮೇ 31ರವರೆಗೆ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣದೊಳಗೆ ಬಿಡಲಾಗುವುದು. ಅವರ ಜೊತೆ ಬರುವವರಿಗೆ ಅವಕಾಶವಿಲ್ಲ’ ಎಂದು ಶರ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.