ADVERTISEMENT

ದಾವಣಗೆರೆ: 'ಒಳಮೀಸಲಾತಿ ಕುರಿತು ಸಾಧಕ–ಬಾಧಕ ಚರ್ಚಿಸಿ ತೀರ್ಮಾನ'

ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 14:53 IST
Last Updated 7 ಸೆಪ್ಟೆಂಬರ್ 2020, 14:53 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ದಾವಣಗೆರೆ: ಒಳಮೀಸಲಾತಿ ಕೇಳುವುದು ಕೇಳುವುದು ಸರಿ ಇದೆ. ಆದರೆ ಅದರ ಸಾಧಕ–ಬಾಧಕಗಳನ್ನು ಗಮನಿಸಿ ಎಲ್ಲರಿಗೂ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

‘ಒಳ ಮೀಸಲು ಹೊಸತು ಅಲ್ಲ. ಯಾರಿಗೆ ಅಗತ್ಯವಿದೆಯೋ ಅವರು ಕೇಳುವುದರಲ್ಲಿ ತಪ್ಪಿಲ್ಲ. ಈ ಕುರಿತು ಹಲವು ಹೋರಾಟಗಳು ನಡೆದಿವೆ. ಒತ್ತಡಗಳೂ ಬರುತ್ತಿವೆ. ಎಲ್ಲರನ್ನೂ ಮೆಚ್ಚಿಸುವ ರೀತಿಯಲ್ಲಿ ಪಕ್ಷದ ಮುಖಂಡರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದಿದ್ದರೇ ಹೊರತು, ಬದಲಾಯಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿತ್ತು. ಆದರೆ, ಕಾಂಗ್ರೆಸ್ 88 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯವನ್ನೇ ಬದಲಿಸಿದೆ. ಸಂವಿಧಾನಕ್ಕೆ ಬಹಳ ಗೌರವ ಕೊಡುತ್ತೇವೆ ಎಂದಿದ್ದ ಪ್ರಧಾನಿ ಇಂದಿರಾಗಾಂಧಿ ಆಡಳಿತದಲ್ಲಿ ತುರ್ತುಪರಿಸ್ಥಿತಿ ಹೇರಿ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲಾಗಿಸಿದ್ದರು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಬಿಜೆಪಿಯವರು ಅಂಬೇಡ್ಕರ್ ವಿರೋಧಿ, ಮೀಸಲಾತಿ ವಿರೋಧಿ ಎಂಬ ಹಸಿಸುಳ್ಳನ್ನು ಕಾಂಗ್ರೆಸ್‌ನವರು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಈಗ ಸತ್ಯದ ಅರಿವಾಗಿರುವುದರಿಂದ ಹೆಚ್ಚಿನ ಪರಿಶಿಷ್ಟ ಜಾತಿಯವರು ಬಿಜೆಪಿಯತ್ತ ಮುಖ ಮಾಡಿದ್ದು, ಪ್ರಸ್ತುತ ಬಿಜೆಪಿ ಪರಿಶಿಷ್ಟರ ಸಂಗಮವಾಗಿ ಪರಿವರ್ತನೆಗೊಳ್ಳುತ್ತಿದೆ’ ಎಂದರು.

ಮೀಸಲಾತಿ ತೆಗೆದು ಹಾಕುವುದು ಬಿಜೆಪಿಯ ಉದ್ದೇಶವಲ್ಲ. ಇನ್ನೂ ಹತ್ತು ವರ್ಷಗಳ ಕಾಲ ಮೀಸಲಾತಿ ಮುಂದುವರಿಯಲಿದೆ ಎಂದರು.

ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತನಾಯ್ಕ್, ಮುಖಂಡರಾದ ಬಸವರಾಜನಾಯ್ಕ, ಮಂಜನಾಯ್ಕ, ಅಂಜಿನಪ್ಪ, ಜಿ.ಬಿ.ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.