ADVERTISEMENT

‘ಜಿಂದಾಲ್‌ಗೆ ಭೂಮಿ ನೀಡಿದ್ದರಿಂದ ಬೇಸತ್ತು ರಾಜೀನಾಮೆ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:22 IST
Last Updated 1 ಜುಲೈ 2019, 20:22 IST

ದಾವಣಗೆರೆ: ಜಿಂದಾಲ್‌ ಕಂಪೆನಿಗೆ ಸರ್ಕಾರ ಭೂಮಿ ಕೊಟ್ಟಿದ್ದರಿಂದ ಮನನೊಂದು ಶಾಸಕ ಆನಂದ್‌ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿಯಲ್ಲಿ ಸೋಮವಾರ ಬರ ಪರಶೀಲನೆಗೂ ಮೊದಲು ಮಾಧ್ಯಮದವರ ಜತೆ ಅವರು ಮಾತನಾಡಿ, ‘ಜಿಂದಾಲ್‌ಗೆ ಭೂಮಿ ಕೊಡುವಾಗ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದೆ. ಅದರಲ್ಲಿ ನಿನ್ನ ಪಾಲು ಎಷ್ಟು ಎಂದು ಶಾಸಕರನ್ನು ಆ ಭಾಗದ ಜನರು ಕೇಳುತ್ತಿದ್ದು, ಇದರಿಂದ ಮನಸ್ಸಿಗೆ ಮುಜುಗರವಾಗಿ ರಾಜೀನಾಮೆ ನೀಡಿರಬಹುದು ಎಂಬುದು ನನ್ನ ಅನಿಸಿಕೆ' ಎಂದರು.

‘ಆನಂದ್‌ ಸಿಂಗ್ ರಾಜೀನಾಮೆಯ ಹಿಂದೆ ಬಿಜೆಪಿ ಕೈವಾಡವಿಲ್ಲ. ಸಮ್ಮಿಶ್ರ ಸರ್ಕಾರದ ವಿರುದ್ಧ ಬೇಸತ್ತು ರಾಜೀನಾಮೆ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸೋಲಿನ ಹತಾಶ ಮನೋಭಾವನೆಯಿಂದ ಕ್ಷುಲ್ಲಕ ಹೇಳಿಕೆಯನ್ನು ನೀಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಬರಗಾಲ ಇದ್ದು, ಕುಡಿಯುವ ನೀರಿಗೆ ಹಾಹಾಕಾರ ಇದೆ. ತೋಟಗಳು ಒಣಗಿದೆ. ಮಳೆ ಇದೆ, ಬೆಳೆ ಇಲ್ಲ. ನಾಮಕಾವಸ್ತೆಗೆ ಮೂರು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಗ್ರಾಮ ವಾಸ್ತವ್ಯದಿಂದ ಏನು ಪರಿಹಾರ ಕಂಡು ಹಿಡಿ‌ದಿದ್ದೀರಿ? ಹಳ್ಳಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಯಾವೊಂದು ಗ್ರಾಮಗಳಿಗೂ ಭೇಟಿ ನೀಡುತ್ತಿಲ್ಲ. ಅವರೇನು ಕತ್ತೆ ಕಾಯುತ್ತಿದ್ದಾರಾ? ಯಾವ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ನಮ್ಮ ಸರ್ಕಾರವಿದ್ದಾಗ ಯಡಿಯೂರಪ್ಪ ಸೇರಿ ನಾವು ಅತಿವೃಷ್ಟಿ, ಅನಾವೃಷ್ಟಿಯಾಗಿದ್ದಾಗ ಪ್ರವಾಸ ಮಾಡಿದೆವು. ಪ್ರತಿ ಜಿಲ್ಲೆಗಳಲ್ಲಿ ಪರಿಹಾರ ನೀಡಿದ್ದೆವು’ ಎಂದರು.

‘ಇದು ರೈತ ವಿರೋಧಿ ಸರ್ಕಾರ ತೊಲಗಬೇಕು. ಕಾಂಗ್ರೆಸ್‌ನಿಂದ ಎಷ್ಟು ಜನ ರಾಜೀನಾಮೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಯಾವ ಪುರುಷಾರ್ಥಕ್ಕಾಗಿ ಈ ಸರ್ಕಾರ ಇರಬೇಕು. ಗೌರವ ಇದ್ದರೆ ಮುಖ್ಯಮಂತ್ರಿ ಅಮೆರಿಕದಿಂದಲೇ ಫ್ಯಾಕ್ಸ್ ಅಥವಾ ಮೇಲ್ ಮೂಲಕ ರಾಜೀನಾಮೆ ಕಳುಹಿಸಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.