ADVERTISEMENT

‘ಜಗಳೂರು: ರಸ್ತೆ ವಿಸ್ತರಣೆ–ವರ್ತರಕನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:26 IST
Last Updated 31 ಮೇ 2025, 16:26 IST
ಎಚ್.ಪಿ.ರಾಜೇಶ್
ಎಚ್.ಪಿ.ರಾಜೇಶ್   

ಜಗಳೂರು: ಪಟ್ಟಣದ ಮಧ್ಯೆ ಹಾದುಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ತ್ವರಿತವಾಗಿ ಮುಗಿಯಬೇಕಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮಾಲೀಕರು, ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಸ್ತೆ ವಿಸ್ತರಣೆಗೆ ನಮ್ಮ ಅಭ್ಯಂತರವಿಲ್ಲ. ಸರ್ಕಾರದಿಂದ ₹20 ಕೋಟಿ ಹಣ ಬಿಡುಗಡೆಯಾಗಿದ್ದು, ರಸ್ತೆಯ ಮಧ್ಯ ಭಾಗದಿಂದ 40 ಅಡಿ ವಿಸ್ತರಿಸಬೇಕೇ ಅಥವಾ 50 ಅಡಿ ವಿಸ್ತರಿಸಬೇಕೇ ಎಂಬ ಗೊಂದಲವಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲೇ ಸಣ್ಣ ರಸ್ತೆ ಇದೆ. ಜಗಳೂರು ಚಿಕ್ಕ ಪಟ್ಟಣವಾಗಿದ್ದು, ಇಲ್ಲಿ ವ್ಯಾಪಾರ ಮುಖ್ಯ. 40 ಅಡಿಗೆ ಸೀಮಿತಗೊಳಿಸಿ ರಸ್ತೆ ಮತ್ತು ಚರಂಡಿಯನ್ನು ನಿರ್ಮಿಸುವುದು ಸೂಕ್ತ. 50 ಅಡಿ ವಿಸ್ತರಣೆ ಮಾಡುವುದು ಬೇಡ. 40 ಅಡಿ ವಿಸ್ತರಣೆಗೆ ಮಾತ್ರ ಅನುದಾನ ಲಭ್ಯವಿದ್ದು, ಅಷ್ಟಕ್ಕೇ ಮಾಡಿ. ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಕೆಲವರು ವರ್ತಕರು ಕೋರ್ಟ್‌ಗೆ ಹೋಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಗ ಕಾಮಗಾರಿ ಮುಗಿಸಿ’ ಎಂದು ರಾಜೇಶ್ ಒತ್ತಾಯಿಸಿದರು.

ADVERTISEMENT

ಪಟ್ಟಣದಲ್ಲಿ ವಾಹನ ಸಂಚಾರದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಟ್ಟಣದ ಹೊರ ವಲಯದಲ್ಲಿ ವರ್ತುಲ ರಸ್ತೆ ನಿರ್ಮಿಸುವುದಾಗಿ ಶಾಸಕರು ಹೇಳಿದ್ದಾರೆ. ಅದಕ್ಕೆ ನಮ್ಮ ಬೆಂಬಲವಿದೆ. ಪಟ್ಟಣ ಅಭಿವೃದ್ಧಿಯಾಗಲಿ ಎಂದರು.

‘ತಾಲ್ಲೂಕಿನಲ್ಲಿ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಅಧಿಕಾರಿಗಳೇ ಹೇಳಿಕೊಳ್ಳುತ್ತಿದ್ದಾರೆ. ಕೇವಲ ಮೂರು ತಿಂಗಳಿಗೆ ವರ್ಗಾವಣೆ ಬಯಸುತ್ತಿದ್ದಾರೆ. ಆತಂಕ ಮತ್ತು ಅನಿಶ್ಚಿತತೆಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಬೇಕಾಬಿಟ್ಟಿ ಕಾಮಗಾರಿ ನಡೆಯುತ್ತಿದೆ. ಕಳಪೆ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಅವುಗಳನ್ನು ಕೆಲವರು ರಾತ್ರೋರಾತ್ರಿ ತೆಗೆದು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿಗೆ. ಈ ಬಗ್ಗೆ ಶಾಸಕರು ಗಮನಹರಿಸಿ, ಅಧಿಕಾರಿಗಳನ್ನು ಕರೆದು ಪ್ರಶ್ನಿಸಲಿ’ ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಸದಸ್ಯ ರೇವಣಸಿದ್ದಪ್ಪ, ಮುಖಂಡರಾದ ಮಂಜಣ್ಣ, ಬಿದರಕೆರೆ ರವಿಕುಮಾರ್, ಓಬಳೇಶ್, ಪೂಜಾರ ಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.