ದಾವಣಗೆರೆ: ಆಗಷ್ಟೇ ಸೂರ್ಯ ಮುಳುಗಿ ಮಬ್ಬುಗತ್ತಲು ಕವಿದಿತ್ತು. ಸೋನೆಯಂತೆ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ್ದರೂ ಜಗಳೂರು ಹೊರವಲಯದ ಗಿಡ್ಡನಕಟ್ಟೆ ಕ್ರಾಸ್‌ನ ರಾಜ್ಯ ಹೆದ್ದಾರಿಯಲ್ಲಿದ್ದ ಗುಂಡಿಗಳಲ್ಲಿ ನೀರಿತ್ತು. ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಜೆ.ಎನ್. ಮಹೇಶಗೌಡ ಅವರಿಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆಯಿತು.
ಆ. 9ರಂದು ಸಂಜೆ 7.30ಕ್ಕೆ ನಡೆದ ಈ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಪ್ರಾಣ ಕಳೆದುಕೊಂಡರು. ರಸ್ತೆಯಲ್ಲಿದ್ದ ಗುಂಡಿಯ ಬಗ್ಗೆ ಗೊತ್ತಿಲ್ಲದೇ ಬಂದ ಗೂಡ್ಸ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟರು.
ಆನಗೋಡು– ಕೊಡಗನೂರು–ಸಾಸಲು ಮಾರ್ಗದಲ್ಲಿ ಖಾಸಗಿ ಬಸ್ಸೊಂದು ನಿತ್ಯ ಐದಾರು ಬಾರಿ ಸಂಚರಿಸುತ್ತಿತ್ತು. ಈ ಮಾರ್ಗದಲ್ಲಿ ಸೃಷ್ಟಿಯಾಗಿರುವ ಗುಂಡಿಯಲ್ಲಿ ಬಸ್ ಸಂಚಾರ ದುರ್ಬರವಾಗಿದೆ. ನಿಧಾನವಾಗಿ ಒಂದೊಂದೇ ಟ್ರಿಪ್ ರದ್ದುಪಡಿಸಿದ ಬಸ್, ಈಗ ದಿನದಲ್ಲಿ ಎರಡು ಬಾರಿ ಮಾತ್ರವೇ ಸಂಚರಿಸುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ದಾಟಿ ಸೇವೆ ಒದಗಿಸುವುದು ಅಸಾಧ್ಯವೆಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಬಸ್ ಮಾಲೀಕರು.
ಈ ಎರಡು ಘಟನೆಗಳು ಭಿನ್ನವಾದರೂ, ಜಿಲ್ಲೆಯಲ್ಲಿನ ರಸ್ತೆಗಳ ದುಃಸ್ಥಿತಿಯನ್ನು ಬಿಂಬಿಸುತ್ತಿವೆ. ಸಂಚಾರ ಯೋಗ್ಯ ಮಾರ್ಗಗಳು ಇಲ್ಲವೇನೋ ಎನ್ನುವ ಮಟ್ಟಿಗೆ ರಸ್ತೆಗಳು ಹಾಳಾಗಿವೆ. ಮೇ ಮೊದಲ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಗಳು ಹಾಳಾಗಿವೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ದಾವಣಗೆರೆ ತಾಲ್ಲೂಕಿನ ಕೊಡಗನೂರು ಸಮೀಪದ ಕೆರೆ ಏರಿ ದುರಸ್ತಿ ಕಾರ್ಯವನ್ನು ನೀರಾವರಿ ಇಲಾಖೆ ಕೈಗೆತ್ತಿಕೊಂಡಿದೆ. ಇದರಿಂದ ಬೊಮ್ಮೇನಹಳ್ಳಿ– ಪರಶುರಾಂಪುರದ ಮೂಲಕ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ದೊಡ್ಡ ವಾಹನಗಳು ಓಡಾಡಿ ಈ ಮಾರ್ಗದಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿದ್ದು, ಸಂಚಾರ ಸಂಕಷ್ಟ ಎದುರಾಗಿದೆ.
ಜಗಳೂರು–ದಾವಣಗೆರೆ ಸಂಪರ್ಕಿಸುವ ರಸ್ತೆಯನ್ನು ಬೇಸಿಗೆಯಲ್ಲಿ ರೈತರು ಅಲ್ಲಲ್ಲಿ ಅಗೆದು ಜಮೀನುಗಳಿಗೆ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಿಕೊಂಡಿದ್ದರು. ರಸ್ತೆಯನ್ನು ಹೀಗೆ ಅಗೆದಿರುವ ಸ್ಥಳಗಳಲ್ಲಿ ಮಳೆನೀರಿನಿಂದ ಕೊರಕಲು ಸೃಷ್ಟಿಯಾಗಿವೆ. ವಾಹನ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಗಳೂರು ಪಟ್ಟಣದ ಬಹುತೇಕರು ವಾಣಿಜ್ಯ–ವ್ಯವಹಾರಗಳಿಗೆ ದಾವಣಗೆರೆ ಬದಲು ಚಿತ್ರದುರ್ಗದತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ.
ಹರಿಹರದ ಮೂಲಕ ಹಾದು ಹೋಗಿರುವ ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿ ಗುಂಡಿಮಯವಾಗಿದೆ. ಬೀರೂರು–ಸಮಸಗಿ ರಾಜ್ಯ ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ಹೆದ್ದಾರಿ ಮೇಲೆ ಹರಿಯುತ್ತಿದೆ. ನಗರದ ರೈಲ್ವೆ ಗೇಟ್‌ಗೆ ನಿರ್ಮಿಸಿದ ಮೇಲ್ಸೇತುವೆ, ಸರ್ವಿಸ್ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ರಾಜನಹಳ್ಳಿ–ಬಿಳಸನೂರು ರಸ್ತೆಯಲ್ಲಿ ವಾಹನಗಳು ಓಲಾಡುತ್ತ ಸಂಚರಿಸುತ್ತಿವೆ.
ಹೊನ್ನಾಳಿಯ ಅರ್ಬನ್ ಬ್ಯಾಂಕ್ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ದುರ್ಗಿಗುಡಿ, ಉತ್ತರ ಮತ್ತು ದಕ್ಷಿಣ ಭಾಗದ ಬಡಾವಣೆ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ತಾಲ್ಲೂಕಿನ ಮಾಸಡಿ–ಗೊಲ್ಲರಹಳ್ಳಿ ನಡುವಿನ ರಸ್ತೆ ಸಂಪೂರ್ಣ ಹಾಳಾಗಿದೆ. ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹೊನ್ನಾಳಿಯಿಂದ ಚೀಲೂರು ದೊಡ್ಡೇರಿವರೆಗೆ ಗುಂಡಿಮಯವಾಗಿದೆ. ಸಂಪೂರ್ಣ ಹಾಳಾಗಿರುವ ಈ ಹೆದ್ದಾರಿಯಲ್ಲಿ ಸಂಚರಿಸುವುದು ಕಷ್ಟವಾಗಿದೆ.
ನ್ಯಾಮತಿ–ಕೊಮ್ಮನಾಳ್ ರಸ್ತೆಯ ಗುಂಡಿಗಳಲ್ಲಿ ಸದಾ ನೀರು ನಿಂತಿರುತ್ತದೆ. ನ್ಯಾಮತಿ ತಾಲ್ಲೂಕಿನ ಆರುಂಡಿ–ಕೆಂಚಿಕೊಪ್ಪ ಮಾರ್ಗ ಹಾಳಾಗಿದೆ. ಚನ್ನಗಿರಿ ತಾಲ್ಲೂಕಿನ ಹನುಮಲ್ಲಾಪುರ– ತಾವರೆಕೆರೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಬಸವಾಪಟ್ಟಣ, ಸಂತೆಬೆನ್ನೂರು ಸುತ್ತಲಿನ ಗ್ರಾಮೀಣ ರಸ್ತೆಗಳ ಸ್ಥಿತಿಯೂ ಚಿಂತಾಜನಕವಾಗಿದೆ.
₹ 14 ಕೋಟಿ ಅನುದಾನ ಬಿಡುಗಡೆ
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಹಾಗೂ ಗುಂಡಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ₹ 14 ಕೋಟಿ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಹೆದ್ದಾರಿಗಳಿಗೆ ₹ 7 ಕೋಟಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಿಗೆ ₹ 7 ಕೋಟಿಯನ್ನು ಹಂಚಿಕೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
‘ಮಳೆಯಿಂದ ಹಾಳಾಗಿರುವ ರಸ್ತೆಗಳ ಸಮೀಕ್ಷೆ ನಡೆಸಿ ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು. ಇದಕ್ಕೆ ಅನುಮೋದನೆಯೂ ಸಿಕ್ಕಿದೆ. ಪ್ರತಿ ಕಿ.ಮೀ.ಗೆ ₹ 1.5 ಲಕ್ಷ ಅನುದಾನ ಲಭ್ಯವಾಗಿದೆ. ರಸ್ತೆ ಬದಿಯ ಗಿಡಗಳನ್ನು ತೆರವುಗೊಳಿಸಿ ಗುಂಡಿ ಮುಚ್ಚಿ ದುರಸ್ತಿಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಿ. ನರೇಂದ್ರ ಬಾಬು ತಿಳಿಸಿದ್ದಾರೆ.
ನಗರದಲ್ಲೂ ಮೊಳಕಾಲುದ್ದ ಗುಂಡಿ
ದಾವಣಗೆರೆಯ ಹದಡಿ ರಸ್ತೆ, ಪಿ.ಬಿ. ರಸ್ತೆಯೂ ಸೇರಿದಂತೆ ಬಹುತೇಕ ಮಾರ್ಗಗಳು ಗುಂಡಿಮಯವಾಗಿವೆ. ಮೊಳಕಾಲುದ್ದ ಗುಂಡಿಯಲ್ಲಿ ಸಂಚರಿಸುವುದು ದುಸ್ತರವಾಗಿದೆ.
ಹದಡಿ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಅಂಬೇಡ್ಕರ್ ಭವನದಿಂದ ರಾಷ್ಟ್ರೀಯ ಹೆದ್ದಾರಿ– 48ರವರೆಗಿನ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ಚಿಕ್ಕ ಮಳೆಗೂ ತುಂಬಿಕೊಳ್ಳುವ ಈ ಗುಂಡಿಗಳಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತಿದೆ. ನಿಟುವಳ್ಳಿ, ಎಸ್.ಎಸ್.ಬಡಾವಣೆ, ಸರಸ್ವತಿ ನಗರ ಸೇರಿ ನಗರದ ಹಲವೆಡೆಯ ರಸ್ತೆಗಳು ಗುಂಡಿಮಯವಾಗಿವೆ.
‘ಹದಡಿ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ತಾತ್ಕಾಲಿಕವಾಗಿ ಜಲ್ಲಿ ಮತ್ತು ವೆಟ್‌ಮಿಕ್ಸ್ ಹಾಕಲಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇದು ಗುಂಡಿಗಳಿಗೆ ಅಂಟಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಿ.ನರೇಂದ್ರ ಬಾಬು.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಕೆಲವೆಡೆ ಜಲ್ಲಿಕಲ್ಲು ವೆಟ್‌ಮಿಕ್ಸ್ ಹಾಕಿ ದುರಸ್ತಿಗೆ ಪ್ರಯತ್ನ ನಡೆದಿದೆ. ಶೀಘ್ರದಲ್ಲೇ ಎಲ್ಲ ಗುಂಡಿ ಮುಚ್ಚಲಾಗುವುದುಜಿ. ನರೇಂದ್ರ ಬಾಬು, ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಮಲೇಬೆನ್ನೂರು–ಹರಿಹರ ರಸ್ತೆ ಹಾಳಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಶೋಚನೀಯ. ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆಕುಂದೂರು ಮಂಜಪ್ಪ, ಹೊಳೆಸಿರಿಗೆ ಹರಿಹರ ತಾಲ್ಲೂಕು
ನ್ಯಾಮತಿ–ಬೆಳಗುತ್ತಿ ಮಾರ್ಗದಲ್ಲಿ ಕೆಲ ದಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಗುಂಡಿ ಮುಚ್ಚಿದ ಬಳಿಕ ಬಸ್ ಸಂಚಾರ ಪುನರಾರಂಭಗೊಂಡಿದೆಜಿ.ನಾಗರಾಜ ರಾಮೇಶ್ವರ, ನ್ಯಾಮತಿ ತಾಲ್ಲೂಕು
ಸಹಕಾರ: ಡಿ.ಶ್ರೀನಿವಾಸ್, ಎನ್.ಕೆ.ಆಂಜನೇಯ, ಇನಾಯತ್ ಉಲ್ಲಾ ಟಿ., ಡಿ.ಎಂ.ಹಾಲಾರಾಧ್ಯ, ಎಂ.ನಟರಾಜನ್, ಎಸ್.ಎಂ. ಮಂಜುನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.